
ಸುಂಟಿಕೊಪ್ಪ ಡಿ.16 NEWS DESK : ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮಾದಾಪುರ ಕ್ಲಸ್ಟರ್ ಕೇಂದ್ರದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಾಗೂ ಕಲೋತ್ಸವ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ತೊಟ್ಟು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳು ಪ್ರೇಕ್ಷಕರ ಗಮನ ಸೆಳೆದರು. ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಪೊನ್ನಣ್ಣ, ಮಕ್ಕಳ ಇಂತಹ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರ ಜತೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಸ್ಟರ್ ಸಿಆರ್ ಪಿ, ಟಿ.ಈ. ಮಂಜುನಾಥ್ , ಮಕ್ಕಳ ಕಲಾ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ಶಾಲಾ ಮುಖ್ಯ ಶಿಕ್ಷಕಿ ಎ.ಉಷಾ ಮತ್ತು ಪಿಡಿಓ ರವಿ ಮಾತನಾಡಿದರು. ಶಿಕ್ಷಕಿ ಜ್ಞಾನೇಶ್ವರಿ ನಿರ್ವಹಿಸಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಸಿಆರ್ ಪಿ ಗಳಾದ ಟಿ.ಈ.ವಿಶ್ವನಾಥ್, ಶಿಕ್ಷಕರಾದ ಎ.ಎಂ.ಭರತ್, ಬಿಪಿನ್, ಎಸ್.ಆರ್.ಶಿವಲಿಂಗ, ಗ್ರಾಮ ಪಂಚಾಯ್ತಿ ಸದಸ್ಯರು, ಎಸ್‍ಡಿಎಂಸಿ ಸದಸ್ಯರು , ವಿವಿಧ ಶಾಲೆಯ ಶಿಕ್ಷಕರು, ಕ್ಲಸ್ಟರ್ ವ್ಯಾಪ್ತಿಯ 15 ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರುಗಳು, ಪೋಷಕರು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ಛದ್ಮವೇಷ ಸ್ಪರ್ಧೆ, ರಂಗೋಲಿ, ಚಿತ್ರಕಲೆ, ಅಭಿನಯ, ಕವನ ವಾಚನ, ಕವ್ವಾಲಿ, ಗಝಲ್, ಧಾರ್ಮಿಕ ಪಠಣ, ಜಾನಪದ ಗೀತೆ, ಆಶುಭಾಷಣ, ಪ್ರಬಂಧ, ಭಾಷಣ, ಚರ್ಚಾಸ್ಪರ್ಧೆ ಮತ್ತು ರಸಪ್ರಶ್ನೆ, ಜಾನಪದ ನೃತ್ಯ ಹಾಗೂ ಭರತ ನಾಟ್ಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು. ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಮಕ್ಕಳು ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ರಚಿಸಿದರು.









