

ಮಡಿಕೇರಿ ಜ.3 NEWS DESK : ಕೊಡಗು ಜಿಲ್ಲಾ ಬಂಟರ ಸಂಘದಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ರೂ.10 ರಿಂದ 15 ಕೋಟಿ ವೆಚ್ಚದಲ್ಲಿ ‘ಬಂಟರ ಭವನ’ ನಿರ್ಮಾಣಗೊಳ್ಳಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜ.11 ರಂದು ನಗರದ ಹೋಟೆಲ್ ಸಮುದ್ರದಲ್ಲಿ ಬೆ.10.30 ಗಂಟೆಗೆ ನಡೆಯಲಿರುವ ಮಹಾಸಭೆಯಲ್ಲಿ ಬಹು ನಿರೀಕ್ಷೆಯ ಬಂಟರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. ನಗರದ ಅಬ್ಬಿಫಾಲ್ಸ್ ರಸ್ತೆಯ ಬಳಿಯಲ್ಲಿ ಡಾ.ಪ್ರೇಮನಾಥ್ ಪೂಂಜಾ ಅವರು ಉದಾರವಾಗಿ ನೀಡಿರುವ 52 ಸೆಂಟ್ಸ್ ಜಾಗದಲ್ಲಿ ಬಂಟರ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ಸಮುದಾಯ ಬಾಂಧವರು, ದಾನಿಗಳ ನೆರವನ್ನು ಪಡೆದುಕೊಳ್ಳುವುದಾಗಿ ತಿಳಿಸಿದರು. *ಆಡಳಿತ ಮಂಡಳಿ ರಚನೆ* ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆಗೆ ಈಗಾಗಲೆ ಸಂಘದ 486 ಸದಸ್ಯರುಗಳಿಗೆ ಆಹ್ವಾನ ಪತ್ರವನ್ನು ಕಳುಹಿಸಿಕೊಡಲಾಗಿದೆಯೆಂದು ಮಾಹಿತಿ ನೀಡಿದ ಅವರು, ಈ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯೂ ನಡೆಯಲಿದೆ. ಸಂಘದ ಕಾರ್ಯದರ್ಶಿ ವಿ.ರವೀಂದ್ರ ರೈ ಅವರು ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 26 ಸಾವಿರ ಬಂಟ ಸಮಾಜ ಬಾಂಧವರು ನೆಲೆಸಿದ್ದಾರೆ.ಇವರ ಸದಸ್ಯತ್ವವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರತ್ಯೇಕವಾದ ವೆಬ್ ಸೈಟ್, ಆ್ಯಪ್ ಮಾಡುವ ಉದ್ದೇಶ ಇರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ, ಖಜಾಂಚಿ ಬಿ.ಎನ್.ರತ್ನಾಕರ ರೈ, ಉಪಾಧ್ಯಕ್ಷ ಬಿ.ಆರ್. ಸದಾಶಿವ ರೈ, ಮಡಿಕೇರಿ ನಗರಾಧ್ಯಕ್ಷ ಬಿ.ಎಸ್.ಪ್ರಭು ರೈ ಉಪಸ್ಥಿತರಿದ್ದರು.









