
ಮಡಿಕೇರಿ ಜ.3 NEWS DESK : ಚೇನಂಡ ಕುಟುಂಬಸ್ಥರಿಂದ ಪ್ರಸಕ್ತ ಸಾಲಿನ ಏಪ್ರಿಲ್‍ನಲ್ಲಿ ಆರಂಭಗೊಳ್ಳಲಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಭಾಗವಾಗಿ ಮೂರ್ನಾಡಿನಲ್ಲಿ ನಡೆಯುತ್ತಿರುವ ಕೊಡಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯಲ್ಲಿ ಪ್ರತಿಭಾವಂತ 30 ಆಟಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಚೇನಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೂರ್ನಾಡಿನಲ್ಲಿ ಜ.1ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿ ಆರಂಭಗೊಂಡಿದ್ದು, ಜ.4 ರಂದು ಅಂತಿಮ ಪಂದ್ಯಾಟ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯಲ್ಲಿ ಜಾತಿ ಮತಗಳ ಭೇದವಿಲ್ಲದೆ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ 34 ತಂಡಗಳು ಪಾಲ್ಗೊಂಡಿವೆ. ಅಂತಿಮ ಪಂದ್ಯಾಟಕ್ಕೂ ಮೊದಲು ಕೂಡಿಗೆ ಕ್ರೀಡಾ ಶಾಲಾ ತಂಡ ಮತ್ತು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ. ಕಳೆದ ಎರಡು ದಿನಗಳ ಕಾಲ ನಡೆದ ಪಂದ್ಯಗಳಲ್ಲಿ 26 ಫೀಲ್ಡ್ ಗೋಲುಗಳು, 6 ಪೆನಾಲ್ಟಿ ಕಾರ್ನರ್ ಗೋಲುಗಳು, 9 ಪೆನಾಲ್ಟಿ ಶೂಟೌಟ್ ಗೋಲುಗಳು ದಾಖಲಾಗಿವೆ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ, ಎಂಎಲ್‍ಸಿ ಸುಜಾ ಕುಶಾಲಪ್ಪ, ಕಾಂತೂರು ಮೂರ್ನಾಡು ಗ್ರಾಪಂ ಅಧ್ಯಕ್ಷರಾದ ಕುಶನ್ ರೈ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚುಯ್ಯ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ, ಹಾಕಿ ಕೂರ್ಗ್ ಅಧ್ಯಕ್ಷರಾದ ಲವ ಕುಮಾರ್, ಮೂರ್ನಾಡು ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷರಾದ ಜಗತ್ ತಿಮ್ಮಯ್ಯ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಲ್ಮ ಪಾಲ್ಗೊಳ್ಳಲಿದ್ದಾರೆ. *ಉಚಿತ ತರಬೇತಿ* ಪಂದ್ಯಾವಳಿಯಲ್ಲಿ ಆಯ್ಕೆಯಾದ 30 ಆಟಗಾರರಿಗೆ ಚೇನಂಡ ಕಪ್ ಹಾಕಿ ಉತ್ಸವದ ಸಂದರ್ಭ ಒಂದು ತಿಂಗಳ ಕಾಲ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಅಂತಿಮವಾಗಿ 12 ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ,ಅವರಿಗೆ ಬೇಕಾದ ಹಾಕಿ ಪರಿಕರಗಳನ್ನು ವಿತರಿಸುವುದಲ್ಲದೆ, ಅವರನ್ನು ಸ್ಪೋರ್ಟ್ಸ್ ಹಾಸ್ಟೆಲ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆಗಳಿಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಚೇನಂಡ ಕಪ್ ಹಾಕಿ ಉತ್ಸವದ ಅಂಗವಾಗಿ ಹಲ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಪರಿಸರದ ಉಳಿವಿಗಾಗಿ 2 ಸಾವಿರ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗಿದೆ. ‘ಗೋಲಿಗೊಂದು ಸಸಿ ಬೆಳೆಸಿ’ ಎನ್ನುವುದು ಚೇನಂಡ ಕಟುಂಬಸ್ಥರ ಘೋಷವಾಕ್ಯವಾಗಿದೆ ಎಂದು ಮಧು ಮಾದಯ್ಯ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷರಾದ ಚೇನಂಡ ಕಂಬಣಿ ಕರುಂಬಯ್ಯ ಹಾಗೂ ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ ಉಪಸ್ಥಿತರಿದ್ದರು.









