
ಮಡಿಕೇರಿ NEWS DESK ಏ.3 : ಕೊಡಗಿನ ಅತ್ಯಂತ ಎತ್ತರದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಲ್ಲಿದ್ದ ಕೇರಳ ಮೂಲದ ಮಹಿಳೆೆಯೊಬ್ಬರು ನಾಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳ ಒಟ್ಟು ನಾಲ್ಕು ತಂಡಗಳು ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ. ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿ, ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ(36) ನಾಪತ್ತೆಯಾಗಿರುವ ಮಹಿಳೆಯಾಗಿದ್ದಾರೆ. ನಾಪೋಕ್ಲು ಸಮೀಪದ ಯವಕಪಾಡಿ ಕಕ್ಕಬ್ಬೆಯಿಂದ ಸುಮಾರು ಐದು ಕಿಲೋ ಮೀಟರ್ ದೂರ ಕಡಿದಾದ ಹಾದಿಯ ಚಾರಣ ನಡೆಸಿದಲ್ಲಿ, ತಡಿಯಂಡಮೋಳ್ ಶಿಖರವನ್ನು ತಲುಪಬಹುದು. ಗುರುವಾರ ಚಾರಣಕ್ಕೆ ಹೊರಟ ಶರಣ್ಯ ಅವರು ಒಬ್ಬಂಟಿಯಾಗಿದ್ದ ಹಿನ್ನೆಲೆಯಲ್ಲಿ, ಇತರೆ ಚಾರಣಿಗರ ಜೊತೆಗೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಚಾರಣ ತೆರಳಿದವರು ಮರಳಿ ಬಂದಿದ್ದರಾದರು, ಶರಣ್ಯ ಮಾತ್ರ ಹಿಂದಿರುಗಿರಲಿಲ್ಲ. ಈ ಬಗ್ಗೆ ಅಲ್ಲಿನ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮೇರೆ, ಸ್ಥಳೀಯರು ಪೊಲೀಸರು ಹಾಗೂ ಗ್ರಾಮಸ್ಥರು ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರಾದರು ಶರಣ್ಯ ಅವರ ಪತ್ತೆಯಾಗಿರಲಿಲ್ಲ. *ತೀವ್ರ ಶೋಧ*
ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ನಾಲ್ಕು ತಂಡಗಳು ಶ್ವಾನದಳದ ಸಹಕಾರದೊಂದಿಗೆ ಶರಣ್ಯ ಅವರ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.









