

*ಬಿಸಿಲಿನ ತೀವ್ರತೆಯ ಪರಿಣಾಮ : ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ಅಸಮರ್ಪಕವಾದಾಗ ಹೀಟ್ ಎಕ್ಸಾಸ್ಷನ್ ಅಥವಾ ಹೀಟ್ ಸ್ಟ್ರೋಕ್ ಉಂಟಾಗಬಹುದು : ಬರಹ : ಡಾ|| ಕೆ.ಬಿ.ಸೂರ್ಯ ಕುಮಾರ್, ಮಡಿಕೇರಿ* ಈಗಂತೂ ಬೇಸಿಗೆಯ ಕಾಲ. ಈ ಸಮಯದಲ್ಲಿ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಬಿಸಿಲಿನ ತೀವ್ರತೆ , ತಾಪ, ತಡೆಯಲಾರದಷ್ಟು ಹೆಚ್ಚಾಗಿದೆ. ಇದು ಎಲ್ ನೀನೋ ಎಂಬ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗಿ, ತಾಪಮಾನದಲ್ಲಿನ ಏರುಪೇರಿನಿಂದ ಉಂಟಾಗುತ್ತಿರುವ ಬದಲಾವಣೆ. ಇದರಿಂದ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ, ಅತಿ ಬಿಸಿಲಿನ ಮತ್ತು ಬರಗಾಲದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ದಿನಗಳಲ್ಲಿ ಹೊರಗೆ ಕೆಲಸ ಮಾಡುವುದು ಅಥವಾ ಪ್ರಯಾಣಿಸುವುದು ಅನಿವಾರ್ಯವಾಗಿರುವುದರಿಂದ, ಅದರ ತೀವ್ರತೆಯಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. *ಆರೋಗ್ಯ ಸಮಸ್ಯೆಗಳು* >> ಬಿಸಿಲಿನಲ್ಲಿ ದೀರ್ಘಕಾಲ ಕಾಲ ಕಳೆಯುವವರು ದೇಹದಲ್ಲಿ ನೀರಿನ ಕೊರತೆಯನ್ನು (ಡಿಹೈಡ್ರೇಶನ್) ಅನುಭವಿಸುತ್ತಾರೆ. ಇದರಿಂದ ತಲೆಸುತ್ತು, ದೌರ್ಬಲ್ಯ, ನಿಶಕ್ತಿ, ಚರ್ಮ ಒಣಗುವುದು, ತೀವ್ರ ದಾಹ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ಅಸಮರ್ಪಕವಾಗಿದಾಗ ಹೀಟ್ ಎಕ್ಸಾಸ್ಷನ್ ಅಥವಾ ಹೀಟ್ ಸ್ಟ್ರೋಕ್ ಉಂಟಾಗಬಹುದು. ಹೀಟ್ ಸ್ಟ್ರೋಕ್ ಒಂದು ತುರ್ತು ವೈದ್ಯಕೀಯ ಸ್ಥಿತಿ. ದೇಹದ ತಾಪಮಾನ 40°Cಕ್ಕಿಂತ ಹೆಚ್ಚಾದಾಗ, ಮೆದುಳು ಹಾಗೂ ಇತರ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಲಕ್ಷಣಗಳಲ್ಲಿ ತಲೆನೋವು, ಉಬ್ಬಸ, ವಾಂತಿ, ಗೊಂದಲ, ಬೆವರು ನಿಲ್ಲುವುದು, ಮತ್ತು ಕೆಲವೊಮ್ಮೆ ಪ್ರಜ್ಞೆ ತಪ್ಪುವುದು ಕೂಡ ಸೇರಿವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಇದು ಜೀವಕ್ಕೆ ಅಪಾಯಕಾರಿ ಆಗಬಹುದು. ಸೂರ್ಯನಿಂದ ಹೊರಬರುವ ಅಲ್ಟ್ರಾವಯೊಲೆಟ್ (UV) ಕಿರಣಗಳು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರಿಂದ ಚರ್ಮ ಸುಡುವಿಕೆ (ಸನ್‌ಬರ್ನ್), ವಯಸ್ಸಿಗೆ ಮೊದಲೇ ಚರ್ಮದ ಮುಪ್ಪು ಬರುವುದು, ಕಪ್ಪು ಮಚ್ಚೆಗಳು, ಮತ್ತು ಕೆಲವೊಮ್ಮೆ ಚರ್ಮದ ಕ್ಯಾನ್ಸರ್‌ನ ಅಪಾಯವೂ ಉಂಟಾಗುತ್ತದೆ. ಈ ಕಿರಣಗಳಿಂದ ಕಣ್ಣುಗಳಿಗೂ ಹಾನಿಯಾಗಬಹುದು – ಉದಾಹರಣೆಗೆ ಕಣ್ಣಿನ ಕೆಂಪು, ಉರಿ, ಮತ್ತು ದೃಷ್ಟಿ ಸಮಸ್ಯೆಗಳು. ಯಾರಿಗೆ ಹೆಚ್ಚು ಅಪಾಯ?…. – ಹೊರಾಂಗಣದಲ್ಲಿ ಕೆಲಸ ಮಾಡುವವರು (ಕೃಷಿಕರು, ಕಾರ್ಮಿಕರು, ಟ್ರಾಫಿಕ್ ಪೊಲೀಸ್) ವಯೋವೃದ್ಧರು ಮತ್ತು ಮಕ್ಕಳು, ದೀರ್ಘಕಾಲಿಕ ರೋಗಗಳಿಂದ ಬಳಲುವವರು, ಸಾಕಷ್ಟು ನೀರು ಸೇವಿಸದವರು *ಮುನ್ನೆಚ್ಚರಿಕೆ ಕ್ರಮಗಳು* ನೀರಿನ ಸೇವನೆ: ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯಬೇಕು. ತೆಂಗಿನಕಾಯಿ ನೀರು, ಮಜ್ಜಿಗೆ, ಲಿಂಬು ಸರಬತ್ತು ಮುಂತಾದವುಗಳು ಸಹಕಾರಿ. ಸೂರ್ಯನ ಕಿರಣಗಳಿಂದ ರಕ್ಷಣೆಗಾಗಿ ಹೊರಗೆ ಹೋಗುವಾಗ ಟೋಪಿ, ಸನ್‌ಗ್ಲಾಸ್, ಪೂರ್ಣ ಬಾಹು ಇರುವ ಬಿಳಿ ಉಡುಪು ಧರಿಸಬೇಕು. ಕಪ್ಪು ಬಣ್ಣದ ಬಟ್ಟೆ ಹಾಕಬಾರದು. ಸನ್‌ಸ್ಕ್ರೀನ್ ಬಳಕೆ: ಚರ್ಮವನ್ನು UV ಕಿರಣಗಳಿಂದ ರಕ್ಷಿಸಲು SPF ಇರುವ ಸನ್‌ಸ್ಕ್ರೀನ್ ಬಳಸುವುದು ಮುಖ್ಯ. ಮಧ್ಯಾಹ್ನದ ಬಿಸಿಲನ್ನು ತಪ್ಪಿಸಿಕೊಳ್ಳಲು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ನಡುವೆ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. . ಸಮತೋಲನ ಆಹಾರಗಳಾದ ಹಣ್ಣುಗಳು, ತರಕಾರಿಗಳು, ನೀರಿನ ಅಂಶ ಹೆಚ್ಚು ಇರುವ ಆಹಾರ ಸೇವನೆ ಮಾಡಬೇಕು. ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡಿದ ನಂತರ ವಿಶ್ರಾಂತಿ ಪಡೆಯುವುದು ಮುಖ್ಯ. *ಹೀಟ್ ಸ್ಟ್ರೋಕ್ ಆದಾಗ ಏನು ಮಾಡಬೇಕು?* ತಕ್ಷಣ ತಂಪಾದ ಸ್ಥಳಕ್ಕೆ ಕರೆದೊಯ್ಯಬೇಕು >> ದೇಹದ ಮೇಲೆ ತಣ್ಣೀರು ಹಾಕಬೇಕು ಅಥವಾ ತಂಪು ಒದ್ದೆ ಬಟ್ಟೆ ಬಳಸಬೇಕು. ನೀರು ಅಥವಾ ಓಆರ್‌ಎಸ್ ದ್ರಾವಣ ಕೊಡಬೇಕು. ತುರ್ತು ವೈದ್ಯಕೀಯ ಸಹಾಯ ಪಡೆಯಬೇಕು. ಬಿಸಿಲಿನ ತೀವ್ರತೆಯನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅದರ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಿದೆ. ಸರಿಯಾದ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಮಯೋಚಿತ ಚಿಕಿತ್ಸೆಗಳಿಂದ ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. “ಬಿಸಿಲನ್ನು ನಿರ್ಲಕ್ಷಿಸುವುದು ಅಪಾಯ, ಅದನ್ನು ಅರಿತುಕೊಳ್ಳುವುದು ರಕ್ಷಣೆ” ಎಂಬುದು ನಾವು ಮನದಲ್ಲಿಟ್ಟುಕೊಳ್ಳಬೇಕಾದ ಮಾತಾಗಿದೆ.








