
*ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*
ಬದುಕು ಬದಲಿಸುವ ಪುಸ್ತಕ
ನೀ ಅಜ್ಞಾನ ನಿವಾರಕ
ಸುಜ್ಞಾನಕೆ ದ್ಯೋತಕ
ಜ್ಞಾನದ ಸಂರಕ್ಷಕ
ಗೌರವದ ಪ್ರತೀಕ
ವಿದ್ಯೆಯೊಡತಿ ಶಾರದೆಯ
ಕೃಪಾಶೀರ್ವಾದದೊಂದಿಗೆ
ಸೇರಿಕೋ ನಮ್ಮ ಮಸ್ತಕ !!!! ಪುಸ್ತಕಗಳು ಕೇವಲ ಅಕ್ಷರಗಳ ಸಂಕಲನವಲ್ಲ, ಅವು ಮಾನವ ಜೀವನದ ಅತ್ಯಂತ ಅಮೂಲ್ಯ ಸಂಪತ್ತಾಗಿವೆ. ಜ್ಞಾನ, ಅನುಭವ ಮತ್ತು ಭಾವನೆಗಳ ಜೀವಂತ ಭಂಡಾರ. ಒಂದು ಪುಸ್ತಕವನ್ನು ಓದುವುದು ಎಂದರೆ, ಅನೇಕ ಮನಸ್ಸುಗಳ ಚಿಂತನೆಗಳನ್ನು ಅರಿಯುವುದು ಅನೇಕ ಕಾಲಘಟ್ಟಗಳ ಅನುಭವವನ್ನು ಸ್ಪರ್ಶಿಸುವುದಾಗಿದೆ. ಮನುಷ್ಯನ ಜೀವನಕ್ಕೆ ಗಾಳಿ,ನೀರು,ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜ್ಞಾನ ! ಜ್ಞಾನವಿಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವೆ ಇರುವುದಿಲ್ಲ ಅಂತಹ ಜ್ಞಾನವನ್ನು ಮನುಷ್ಯ ಸಂಪಾದಿಸಬೇಕೆಂದರೆ ಅದಕ್ಕೆ ಓದು ವಿದ್ಯೆಯೇ ಮೂಲ ಅಡಿಪಾಯ ಹಾಗಾಗಿ ಎಲ್ಲಾ ಜ್ಞಾನವನ್ನು ತನ್ನಲ್ಲೇ ಹಿಡಿದಿಟ್ಟು ಕೊಂಡಿರುವ ಪುಸ್ತಕಗಳ ಓದು ಜ್ಞಾನಕ್ಕೆ ಅತ್ಯವಶ್ಯಕ. ಜ್ಞಾನವನ್ನು ನೀಡುವ ಪುಸ್ತಕಗಳು ನಮಗೆ…. ಶಿಕ್ಷಣದ ಮೂಲಭೂತ ಆಧಾರ ಸ್ಥಂಭಗಳು…. ವಿಜ್ಞಾನ, ಇತಿಹಾಸ, ಸಾಹಿತ್ಯ, ತತ್ತ್ವಶಾಸ್ತ್ರ… ಪುರಾಣ, ಕಲೆ, ಸಾಹಿತ್ಯ ಹೀಗೆ ಏನೇ ಇರಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪುಸ್ತಕಗಳು ನಮ್ಮ ತಿಳುವಳಿಕೆಯನ್ನು ವಿಸ್ತರಿಸುತ್ತವೆ. ಓದಿನ ಮೂಲಕ ನಾವು ಹೊಸ ವಿಚಾರಗಳನ್ನು ಕಲಿಯುತ್ತೇವೆ, ನಮ್ಮ ಚಿಂತನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ ಮತ್ತು ಜಗತ್ತನ್ನು ವಿಶಾಲವಾಗಿ ನೋಡುವ ದೃಷ್ಟಿಯನ್ನು ಹೊಂದುತ್ತೇವೆ. ಉತ್ತಮ ಪುಸ್ತಕಗಳು ವ್ಯಕ್ತಿತ್ವ ವಿಕಾಸಕ್ಕೂ ಮುಖ್ಯ. ಅವು ನಮ್ಮಲ್ಲಿ ಶಿಸ್ತು, ಸಂಯಮ, ಏಕಾಗ್ರತೆ ಮತ್ತು ಸಹನೆಯನ್ನು ಬೆಳೆಸುತ್ತವೆ. ಒಳ್ಳೆಯ ಪುಸ್ತಕಗಳು ನಮ್ಮ ನಡೆ-ನುಡಿಗಳನ್ನು ರೂಪಿಸುತ್ತವೆ ಮತ್ತು ಜೀವನದ ಮೌಲ್ಯಗಳನ್ನು ಬೋಧಿಸುತ್ತವೆ. ಸಂಕಷ್ಟದ ಸಂದರ್ಭಗಳಲ್ಲಿ ಅವು ನಮಗೆ ಧೈರ್ಯ ಮತ್ತು ಪ್ರೇರಣೆಯನ್ನು ನೀಡುತ್ತವೆ. ಹಾಗಾಗಿ ಮಾನವನ ಬೌದ್ಧಿಕ ಬೆಳವಣಿಗೆಯ ಹಾದಿಯಲ್ಲಿ ಪುಸ್ತಕಗಳು ಅತಿದೊಡ್ಡ ಮಾರ್ಗದರ್ಶಕರು. ಕಾಲಾಂತರಗಳಿಂದಲೂ ಜ್ಞಾನವನ್ನು ಸಂಗ್ರಹಿಸಿ, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪಸರಿಸುವ ಮಹತ್ವದ ಸಾಧನವೇ ಪುಸ್ತಕ. ಈ ನಿಟ್ಟಿನಲ್ಲಿ ಪುಸ್ತಕಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ‘ವಿಶ್ವ ಪುಸ್ತಕ ದಿನ’ ವನ್ನು ಪ್ರತಿವರ್ಷ ಏಪ್ರಿಲ್ 23ರಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಗೆ ಐತಿಹಾಸಿಕ ಹಾಗೂ ಸಾಹಿತ್ಯಿಕ ಹಿನ್ನೆಲೆ ಇದ್ದು 1995ರಲ್ಲಿ ಯುನೆಸ್ಕೋ (UNESCO) ಸಂಸ್ಥೆಯು ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಇದರ ಉದ್ದೇಶ ಪುಸ್ತಕ ಓದುವಿಕೆ, ಪ್ರಕಟಣೆ ಮತ್ತು ಕಾಪಿರೈಟ್ ಹಕ್ಕುಗಳ ಮಹತ್ವವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವುದು. ಹಾಗೆಯೇ ಏಪ್ರಿಲ್ 23ರಂದು ಆಚರಿಸುವುದಕ್ಕೆ ಸಹ ವಿಶೇಷ ಕಾರಣವಿದ್ದು, ಇದೇ ದಿನದಲ್ಲಿ ಜಗತ್ತಿನ ಖ್ಯಾತ ಲೇಖಕರಾದ ವಿಲಿಯಂ ಶೇಕ್ಸ್ ಫಿಯರ್ ಮತ್ತು ಮಿಗ್ವೆಲ್ ಡೆ ಸರ್ವಾಂಟಿಸ್ ಅವರ ನಿಧನ ಸಂಭವಿಸಿದೆ ಎಂದು ಪರಿಗಣಿಸಲಾಗುತ್ತದೆ. ಈ ಮಹಾನ್ ಸಾಹಿತ್ಯಕಾರರ ಸ್ಮರಣಾರ್ಥವಾಗಿ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುಂಚೆ ಸ್ಪೇನ್ ದೇಶದಲ್ಲಿ “ಸೇಂಟ್ ಜಾರ್ಜ್ ದಿನ” (St. George’s Day) ಸಂದರ್ಭದಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪರಂಪರೆ ಇತ್ತು. ಈ ಸಂಪ್ರದಾಯದಿಂದ ಪ್ರೇರಿತಗೊಂಡು ವಿಶ್ವ ಮಟ್ಟದಲ್ಲಿ ಪುಸ್ತಕಗಳ ಮಹತ್ವವನ್ನು ಸಾರಲು ಯುನೆಸ್ಕೋ ಈ ದಿನವನ್ನು ವಿಶ್ವ ಪುಸ್ತಕ ದಿನವೆಂದು ಘೋಷಿಸಿತು. ಈ ದಿನದಂದು ಪುಸ್ತಕಗಳ ಮಹತ್ವವನ್ನು ಸ್ಮರಿಸುವುದಷ್ಟೇ ಅಲ್ಲ ಓದುವ ಹವ್ಯಾಸವನ್ನು ಬೆಳೆಸುವುದು, ಪುಸ್ತಕಗಳ ಪ್ರಕಟಣೆಯನ್ನು ಉತ್ತೇಜಿಸುವುದು ಮತ್ತು ಲೇಖಕರ ಹಕ್ಕುಸ್ವಾಮ್ಯವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ವಿಶ್ವ ಪುಸ್ತಕ ರಾಜಧಾನಿ ಯುನೆಸ್ಕೋ ಪ್ರತಿ ವರ್ಷ ಒಂದು ನಗರವನ್ನು ‘ವಿಶ್ವ ಪುಸ್ತಕ ರಾಜಧಾನಿ’ಯಾಗಿ ಆಯ್ಕೆ ಮಾಡುತ್ತದೆ, ಇದು ಓದುವಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಮತ್ತು ಪುಸ್ತಕ ಮೇಳಗಳು, ವಾಚನಗೋಷ್ಠಿಗಳು ಮತ್ತು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಓದು ಸಂಸ್ಕೃತಿಯನ್ನು ಬೆಳೆಸುವ ದಿಕ್ಕಿನಲ್ಲಿ ಮಾನವರಿಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ. ಪುಸ್ತಕಗಳು ಜ್ಞಾನಕ್ಕೆ ಮಾತ್ರವಲ್ಲ ಭಾವನಾತ್ಮಕವಾಗಿ ನಮ್ಮನ್ನು ಸ್ಪರ್ಶಿಸುತ್ತವೆ. ಕಥೆಗಳು, ಕವನಗಳು ಮತ್ತು ಕಾದಂಬರಿಗಳು ನಮ್ಮನ್ನು ತಮ್ಮದೇ ಲೋಕಕ್ಕೆ ಕರೆದೊಯ್ಯುತ್ತವೆ ಮತ್ತು ಮನಸ್ಸನ್ನು ಮೃದುವಾಗಿಸುತ್ತವೆ. ಅವು ನಮ್ಮಲ್ಲಿ ಕರುಣೆ, ಸಹಾನುಭೂತಿ ಮತ್ತು ಮಾನವೀಯತೆಯನ್ನು ಬೆಳೆಸುತ್ತವೆ. ಕೆಲವೊಮ್ಮೆ ಯಾವುದೋ ಒಂದು ಪುಸ್ತಕ ಒಬ್ಬರ ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತದೆ, ಇನ್ಯಾವುದೋ ಪುಸ್ತಕ ನೊಂದ ಮನಸ್ಸಿಗೆ ಸಾಂತ್ವನ ಹೇಳುವ ಹೆಗಲಾಗಬಹುದು, ಇಲ್ಲವೇ ಸಮಸ್ಯೆಗೆ ಪರಿಹಾರ ಹೊಂದಿರಬಹುದು ಹೀಗೆ ಪುಸ್ತಕಗಳು ಒಳಿತನ್ನೇ ಮಾಡುತ ಸಮಯವನ್ನು ಸದುಪಯೋಗ ಪಡಿಸುತ್ತವೆ ಹೊರತು ನಷ್ಟವನ್ನಂತು ಮಾಡುವುದಿಲ್ಲ ಜೊತೆಗೆ ಹೊಸ ದೃಷ್ಟಿಕೋನಗಳೊಂದಿಗೆ ಮತ್ತಷ್ಟು ಪ್ರಬುದ್ಧತೆಯಿಂದ ಯೋಚಿಸಲು ಅನುವು ಮಾಡಿಕೊಡುತ್ತವೆ ಪ್ರತಿಯೊಬ್ಬರು ಪ್ರತಿದಿನ ತಮ್ಮ ಬಿಡುವಿನ ವೇಳೆಯಲ್ಲಿ ಸ್ವಲ್ಪ ಸಮಯವನ್ನು ಪುಸ್ತಕ ಓದಲು ಮೀಸಲಿಟ್ಟರೆ ಜ್ಞಾನಾರ್ಜನೆಯ ಜೊತೆಗೆ ಮಾನಸಿಕವಾಗಿಯೂ ಶಕ್ತಿಶಾಲಿಯಾಗಬಹುದು, ಅಲ್ಲದೆ ಅನಾವಶ್ಯಕ ಮಾತುಗಳಿಗೂ ವಿರಾಮ ಹಾಕಬಹುದು ಮತ್ತು ಮೊಬೈಲ್ ಬಳಕೆಯನ್ನು ಕಡಿಮೆಯೂ ಮಾಡಬಹುದು. ಹಾಗಾಗಿ ಜನರು ತಮ್ಮ ಸ್ಮಾರ್ಟ್‌ಫೋನ್ ಗಳನ್ನು ದೂರವಿಟ್ಟು ಪುಸ್ತಕಗಳನ್ನು ಓದುವತ್ತ ಮನಸ್ಸನ್ನು ಕೇಂದ್ರೀಕರಿಸಬೇಕು ಇದರಿಂದ ಸಹಾನುಭೂತಿ, ಉತ್ತಮ ಕಲ್ಪನೆ ವಿಮರ್ಶಾತ್ಮಕ ಚಿಂತನೆ ಮತ್ತು ಸಾಕ್ಷರತಾ ಕೌಶಲ್ಯಗಳು ಬೆಳೆಯುತ್ತವೆ. ಇನ್ನು ಸಾಮಾಜಿಕ ದೃಷ್ಟಿಯಿಂದಲೂ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಅವು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಸಾಗಿಸುವುದಷ್ಟೇ ಅಲ್ಲ ವಿಭಿನ್ನ ಭಾಷೆಗಳ ಸಾಹಿತ್ಯವು ಜಗತ್ತಿನ ವೈವಿಧ್ಯತೆಯನ್ನು ಪರಿಚಯಿಸುತ್ತದೆ ಮತ್ತು ಜನರ ನಡುವೆ ಒಗ್ಗಟ್ಟನ್ನು ಬೆಳೆಸುತ್ತದೆ. ಪುಸ್ತಕವು ಕೇವಲ ಕಾಗದಗಳ ಗುಚ್ಛವಲ್ಲ; ಅದು ಜ್ಞಾನ, ಅನುಭವ, ಸಂಸ್ಕೃತಿ ಮತ್ತು ಚಿಂತನೆಗಳ ಸಂಕಲನವಾಗಿದೆ. ಒಂದು ಪುಸ್ತಕದಲ್ಲಿ ಒಂದು ಯುಗದ ಮನೋಭಾವ, ಸಮಾಜದ ಸ್ಥಿತಿ, ವೈಜ್ಞಾನಿಕ ಅನ್ವೇಷಣೆಗಳು, ಸಾಹಿತ್ಯ, ಸೌಂದರ್ಯ ಎಲ್ಲವೂ ಒಂದೇ ಕಡೆ ಸೇರಿರುತ್ತವೆ. ಪುಸ್ತಕಗಳು ನಮ್ಮ ಚಿಂತನೆಗೆ ದಿಕ್ಕು ನೀಡುತ್ತವೆ, ವ್ಯಕ್ತಿತ್ವವನ್ನು ರೂಪಿಸುತ್ತವೆ ಮತ್ತು ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತವೆ. ಅವು ಮಾನವನಿಗೆ ಬೌದ್ಧಿಕ ಸ್ವಾತಂತ್ರ್ಯವನ್ನು ನೀಡುವ ಶಕ್ತಿಯುತ ಸಾಧನಗಳಾಗಿವೆ. ಪುಸ್ತಕಗಳ ಮೌಲ್ಯವನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಅದು ನಮ್ಮ ಅಜ್ಞಾನವನ್ನು ದೂರ ಮಾಡಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ಪುಸ್ತಕವೂ ಒಂದು ಹೊಸ ಲೋಕದ ಬಾಗಿಲು. ಅದು ನಮಗೆ ಕಾಲ, ಸ್ಥಳ, ಪರಿಸ್ಥಿತಿ ಎಂಬ ಮಿತಿಗಳನ್ನು ಮೀರಿ ಹೊಸ ಅನುಭವಗಳನ್ನು ನೀಡುತ್ತದೆ. ಪುಸ್ತಕಗಳು ಅತ್ಯುತ್ತಮ ಮಾಧ್ಯಮವಾಗಿವೆ. ವಿಶ್ವ ಪುಸ್ತಕ ದಿನವು ಪುಸ್ತಕಗಳ ಮಹತ್ವವನ್ನು ನೆನಪಿಸುವ ಮಹತ್ವದ ಸಂದರ್ಭ. ಪುಸ್ತಕ ಓದುವಿಕೆ ಒಂದು ಅಭ್ಯಾಸವಾಗಿ ಅಲ್ಲ, ಅದು ಜೀವನ ಶೈಲಿಯಾಗಬೇಕು ಪುಸ್ತಕಗಳೊಂದಿಗೆ ಬೆಳೆದ ವ್ಯಕ್ತಿಗಳು ಜ್ಞಾನದಲ್ಲಿ ಶ್ರೀಮಂತರಾಗುತ್ತಾರೆ. ಆದ್ದರಿಂದ ಪುಸ್ತಕಗಳನ್ನು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ಓದುವ ಸಂಸ್ಕೃತಿಯನ್ನು ಬೆಳೆಸಿ, ಮುಂದಿನ ಪೀಳಿಗೆಗೂ ಈ ಅಮೂಲ್ಯ ಸಂಪತ್ತನ್ನು ಹಂಚಿಕೊಳ್ಳುವುದು ನಮ್ಮ ಜವಾಬ್ದಾರಿ. “ಪುಸ್ತಕ ಓದುವವರು ಸಾವಿರ ಸಮಸ್ಯೆಗಳನ್ನು ಎದುರಿಸಿ ನೂರಾರು ಜೀವನಗಳನ್ನು ನೋಡಿ ತಿಳಿದು ಅನುಭವ ಪಡೆದು ತಮ್ಮ ಜೀವನವನ್ನು ವಿಸ್ತರಿಸಿ ಕೊಳ್ಳುತ್ತಾರೆ, ಆದರೆ ಓದದೆ ಇರುವವರು ಒಂದೇ ಜೀವನದಲ್ಲಿ ಸೀಮಿತರಾಗುತ್ತಾರೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವವರು ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎನ್ನಬಹುದು, ಹಾಗಾಗಿ ಇದೊಂದು ಆತಂಕಕಾರಿಯಾದ ಬೆಳವಣಿಗೆ ಆಗಿದೆ. ಮೊಬೈಲ್ ಫೋನ್ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುವ ಸೌಲಭ್ಯದಿಂದ ಅದು ಅನಿವಾರ್ಯ ಸಾಧನವಾಗಿದೆ. ಆದರೆ ಇದೇ ಮೊಬೈಲ್ ಹಾವಳಿ, ಪುಸ್ತಕ ಓದುವ ಅಭ್ಯಾಸವನ್ನು ನಿಧಾನವಾಗಿ ಕುಗ್ಗಿಸುತ್ತಿರುವುದು ಒಂದು ವಿಪರ್ಯಾಸಕರ ಸಂಗತಿ. ಮೊಬೈಲ್‌ನಲ್ಲಿ ಲಭ್ಯವಿರುವ ಸಾಮಾಜಿಕ ಜಾಲತಾಣಗಳು, ವಿಡಿಯೋಗಳು ಮತ್ತು ತ್ವರಿತ ಮನರಂಜನೆಗಳು ವ್ಯಕ್ತಿಯನ್ನು ಹೆಚ್ಚು ಆಕರ್ಷಿಸುತ್ತಿವೆ. ಕಡಿಮೆ ಸಮಯದಲ್ಲಿ ಹೆಚ್ಚು ಮನರಂಜನೆ ನೀಡುವ ಈ ಸಾಧನಗಳು, ಆಳವಾದ ಓದಿನ ಅಭ್ಯಾಸವನ್ನು ತಪ್ಪಿಸುತ್ತಿವೆ. ಹಾಗಾಗಿ ಪುಸ್ತಕ ಓದಲು ಬೇಕಾದ ಏಕಾಗ್ರತೆ, ಸಹನೆ ಮತ್ತು ಸಮಯವನ್ನು ಮೊಬೈಲ್ ಬಳಕೆ ಕಿತ್ತುಕೊಳ್ಳುತ್ತಿದೆ. ಪುಸ್ತಕ ಓದುವುದು ಮನಸ್ಸಿಗೆ ಆಳವಾದ ಚಿಂತನೆ ಮತ್ತು ವಿಶ್ಲೇಷಣಾ ಶಕ್ತಿಯನ್ನು ನೀಡುತ್ತದೆ. ಆದರೆ ಮೊಬೈಲ್ ಬಳಕೆ ಹೆಚ್ಚಾದಂತೆ, ಗಮನ ಬೇರೆಡೆಗೆ ಚಲಿಸುವುದು, ದೀರ್ಘಕಾಲ ಏಕಾಗ್ರತೆ ಕಾಪಾಡಿಕೊಳ್ಳಲು ಆಗದಿರುವುದು ಸಾಮಾನ್ಯವಾಗಿದೆ. ಇದರ ಪರಿಣಾಮವಾಗಿ ಯುವಜನತೆ ವಿಶೇಷವಾಗಿ ಪುಸ್ತಕಗಳಿಂದ ದೂರವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದಲ್ಲದೆ, ಮೊಬೈಲ್‌ನಲ್ಲಿನ ಓದು ಸಾಮಾನ್ಯವಾಗಿ ತುಂಡು-ತುಂಡಾಗಿ ನಡೆಯುತ್ತದೆ. ಆದರೆ ಪುಸ್ತಕ ಓದುವಿಕೆ ಕ್ರಮಬದ್ಧ, ಆಳವಾದ ಹಾಗೂ ವಿಚಾರಪೂರ್ಣವಾಗಿರುತ್ತದೆ. ಈ ವ್ಯತ್ಯಾಸವೇ ಜ್ಞಾನ ಸಂಪಾದನೆಯ ಗುಣಮಟ್ಟವನ್ನು ನಿರ್ಧರಿಸುತ್ತದೆ. ಮೊಬೈಲ್ ಕ್ಷಣಿಕ ಮನರಂಜನೆ ನೀಡಬಹುದು; ಆದರೆ ಪುಸ್ತಕ ಜೀವನಪೂರ್ಣ ಜ್ಞಾನವನ್ನು ನೀಡುತ್ತದೆ. ಆದ್ದರಿಂದ ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಪುಸ್ತಕಗಳ ಸ್ಥಾನ ಅಪ್ರತಿಮವಾಗಿದೆ. ಯುಗಗಳು ಬದಲಾಗಬಹುದು, ತಂತ್ರಜ್ಞಾನಗಳು ಅಭಿವೃದ್ಧಿಯಾಗಬಹುದು, ಮಾನವನ ಜೀವನ ಶೈಲಿ ರೂಪಾಂತರಗೊಳ್ಳಬಹುದು. ಆದರೆ ಪುಸ್ತಕಕ್ಕಿರುವ ಮೌಲ್ಯ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಇದೊಂದು ಶಾಶ್ವತ ಸತ್ಯವೂ ಹೌದು, ಶಾಶ್ವತ ತತ್ತ್ವವೂ ಹೌದು. ಪುಸ್ತಕವು ಕೇವಲ ಮಾಹಿತಿಯ ಸಂಗ್ರಹವಲ್ಲ ಅದು ಜ್ಞಾನ, ಅನುಭವ ಮತ್ತು ಚಿಂತನೆಯ ಜೀವಂತ ರೂಪ. ಮೊಬೈಲ್, ಇಂಟರ್‌ನೆಟ್ ಮತ್ತು ಡಿಜಿಟಲ್ ಮಾಧ್ಯಮಗಳು ಎಷ್ಟು ಬೆಳೆಯುತ್ತಿದ್ದರೂ, ಅವು ನೀಡುವ ಮಾಹಿತಿ ಬಹುಶಃ ತಾತ್ಕಾಲಿಕ ಮತ್ತು ಮೇಲ್ಮೈಯಲ್ಲಿರುತ್ತದೆ. ಆದರೆ ಪುಸ್ತಕ ನೀಡುವ ಜ್ಞಾನ ಆಳವಾದದ್ದು ಮತ್ತು ಶಾಶ್ವತವಾದದ್ದು. ಒಂದು ಒಳ್ಳೆಯ ಪುಸ್ತಕವು ಮಾನವನ ಚಿಂತನೆಗೆ ದಿಕ್ಕು ತೋರುತ್ತದೆ, ಜೀವನದ ಮೌಲ್ಯಗಳನ್ನು ಬೋಧಿಸುತ್ತದೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಂತಹ ಪ್ರಭಾವವನ್ನು ಯಾವುದೇ ಕ್ಷಣಿಕ ಮಾಧ್ಯಮ ಸಂಪೂರ್ಣವಾಗಿ ನೀಡಲು ಸಾಧ್ಯವಿಲ್ಲ. ಪುಸ್ತಕಗಳು ಮೌನಗುರುಗಳಂತೆ ನಮ್ಮ ಜೀವನದಲ್ಲಿ ಬೆಳಕು ಹಚ್ಚುತ್ತವೆ. ಇತಿಹಾಸದಲ್ಲಿಯೂ ನಾವು ನೋಡಿದಂತೆ, ಮಹಾನ್ ಚಿಂತಕರು, ವಿಜ್ಞಾನಿಗಳು, ಸಾಹಿತ್ಯಕಾರರು ಎಲ್ಲರೂ ಪುಸ್ತಕಗಳ ಮೂಲಕವೇ ತಮ್ಮ ಜ್ಞಾನವನ್ನು ಪಡೆದುಕೊಂಡಿದ್ದಾರೆ ಮತ್ತು ಸಮಾಜಕ್ಕೆ ನೀಡಿದ್ದಾರೆ. ಹೀಗಾಗಿ ಪುಸ್ತಕವು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜ್ಞಾನವನ್ನು ಸಾಗಿಸುವ ಸೇತುವೆಯಾಗಿದೆ. ಮೊಬೈಲ್ ನಿಂದ ಇಂದು ಓದುವ ಅಭ್ಯಾಸದಲ್ಲಿ ಸ್ವಲ್ಪ ಕುಗ್ಗುವಿಕೆ ಕಂಡರೂ, ಪುಸ್ತಕದ ಮಹತ್ವದಲ್ಲಿ ಯಾವುದೇ ಕುಗ್ಗುವಿಕೆ ಕಂಡಿತ ಇಲ್ಲ. ನಿಜವಾದ ಜ್ಞಾನವನ್ನು ಹುಡುಕುವವರು ಯಾವಾಗಲೂ ಪುಸ್ತಕಗಳ ಸುತ್ತಲೇ ತಿರುಗುತ್ತಾರೆ. ಪುಸ್ತಕಗಳು ಪಾದಗಳನ್ನು ಚಲಿಸದೆ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತವೆ. ದೇಶ ಸುತ್ತಿ ನೋಡು ಇಲ್ಲವೇ ಕೋಶ ಓದಿ ನೋಡು, ಒಮ್ಮೆ ತಲೆ ತಗ್ಗಿಸಿ ಓದು ನಿನ್ನನ್ನು ತಲೆ ಎತ್ತಿ ನೋಡುವಂತೆ ಮಾಡುವೆನು, ಒಂದು ಉತ್ತಮ ಪುಸ್ತಕ ನೂರು ಒಳ್ಳೆಯ ಸ್ನೇಹಿತರಿಗೆ ಸಮ, ಹೀಗೆ ಪುಸ್ತಕಗಳ ಬಗ್ಗೆ ಬುದ್ಧಿಜೀವಿಗಳ ಉಲ್ಲೇಖಗಳು ಬೆಳೆಯುತ್ತಲೆ ಹೋಗುತ್ತವೆ ಹಾಗಾಗಿ ಪುಸ್ತಕಗಳು “ಜ್ಞಾನದ ಆಗರ” ವೇ ಹೊರತು ಸಮಯದ ವ್ಯರ್ಥವಲ್ಲ. ಎಷ್ಟೇ ಹೊಸ ಹೊಸ ಸಾಧನಗಳು ಬಂದರೂ, ಪುಸ್ತಕದ ಮೌಲ್ಯಕ್ಕೆ ಪರ್ಯಾಯವೇ ಇಲ್ಲ. ಪುಸ್ತಕವು ಕಾಲಾತೀತವಾದ ‘ಜ್ಞಾನ ನಿಧಿ’ ಅದರ ಮೌಲ್ಯ ಎಂದೆಂದಿಗೂ ಸಹ ಕಡಿಮೆಯಾಗುವುದಿಲ್ಲ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದೋಣ, ಓದಲು ಸಹ ಪ್ರೇರೇಪಿಸೋಣ.








