
ಮಡಿಕೇರಿ NEWS DESK ಜೂ.23 : ಮಡಿಕೇರಿಯ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆ ತೀವ್ರ ತಪಾಸಣೆ ನಡೆಸಲಾಯಿತು. ಇ-ಮೇಲ್ ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ನ್ಯಾಯಾಲಯದ ಕಟ್ಟಡಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು. ಈ ಘಟನೆ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯಕ್ಕೆ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಪ್ರವೇಶವನ್ನು ತಪಾಸಣೆ ಪೂರ್ಣಗೊಳ್ಳುವವರೆಗೆ ನಿರ್ಬಂಧಿಸಲಾಗಿತ್ತು. ನ್ಯಾಯಾಧೀಶರ ಕೊಠಡಿಗಳು, ನ್ಯಾಯಾಲಯ ಕೊಠಡಿಗಳು, ಆವರಣ, ವಾಹನ ಪಾರ್ಕಿಂಗ್ ಪ್ರದೇಶ, ಕಚೇರಿಗಳು, ಸಮೀಪದ ಕ್ಯಾಂಟೀನ್‌ನಲ್ಲೂ ಶೋಧ ಕಾರ್ಯ ನಡೆಸಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರಲಿಲ್ಲ. ಆ ಬಳಿಕವೇ ನ್ಯಾಯಾಲಯಕ್ಕೆ ತೆರಳಲು ಪೊಲೀಸರು ಅನುಮತಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಮ್ತಾಝ್ ಅವರು ಬೆಳಿಗ್ಗೆ ನ್ಯಾಯಾಲಯಕ್ಕೆ ಇ-ಮೇಲ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ನಿಷ್ಕಿçಯ ದಳ ಮತ್ತು ಶ್ವಾನದಳ ಸಂಪೂರ್ಣ ನ್ಯಾಯಾಲಯವನ್ನು ತಪಾಸಣೆ ನಡೆಸಿದೆ. ಯಾವುದೇ ಸಂಶಯಾಸ್ಪದ ವಸ್ತು ಅಥವಾ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರಿಗೂ ಮಾಹಿತಿ ನೀಡಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. *ಇ-ಮೇಲ್ ಸಂದೇಶ* ‘ಗೌರವಾನ್ವಿತ ನ್ಯಾಯಾಧೀಶರೇ’ ಎಂದು ಸಂಬೋಧಿಸಿ,’ ನಿಮ್ಮ ನ್ಯಾಯಾಲಯವನ್ನು ಮಧ್ಯಾಹ್ನ 2 ಗಂಟೆಗೆ ಸೈನೈಡ್ ಬಾಂಬ್‌ಗಳನ್ನು ಬಳಸಿ ಸ್ಫೋಟಿಸಲಾಗುವುದು. ದುರ್ಗಾ ಎಂಬುವವರು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾರೆ. ಎಲ್ಲಾ ಸಾರ್ವಜನಿಕರನ್ನು ಸ್ಥಳಾಂತರಿಸಿ, 2 ಐಸಿಸ್ ಆತ್ಮಹತ್ಯಾ ಬಾಂಬರ್‌ಗಳು ಸಹ ಬರಬಹುದು ಎಂದು ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದು 2ನೇ ಬಾಂಬ್ ಬೆದರಿಕೆಯ ಸಂದೇಶವಾಗಿದ್ದು, ಈ ಹಿಂದೆ ಫೆ.16ರಂದು ಕೂಡ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಮಡಿಕೇರಿ ನ್ಯಾಯಾಲಯಕ್ಕೆ ಬಂದಿತ್ತು.









