
ಮಡಿಕೇರಿ NEWS DESK ಜೂ.23 : ಕೊಡಗು ಜಿಲ್ಲೆಯ ಕೃಷಿಕರ ಬದುಕಿಗೆ ಸಂಕಷ್ಟವನ್ನು ತಂದೊಡ್ಡುತ್ತಿರುವ ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳ ಹಾವಳಿಯನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತೀಯ ಕಿಸಾನ್ ಸಂಘದ ರಾಷ್ಟಿçÃಯ ಅಧ್ಯಕ್ಷ ಕೆ.ಸಾಯಿರೆಡ್ಡಿ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಕಳೆದೊಂದು ವರ್ಷದಲ್ಲಿ 17 ಮತ್ತು ಆರು ವರ್ಷಗಳ ಅವಧಿಯಲ್ಲಿ 78 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಸರಕಾರಗಳು ತುರ್ತು ಪರಿಹಾರೋಪಾಯಗಳನ್ನು ರೂಪಿಸಬೇಕು ಎಂದರು. ಸಂಘವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಕೃಷಿಕರ ಸಂಕಷ್ಟಗಳನ್ನು ತಿಳಿದುಕೊಂಡಿದೆ. ಇದೀಗ ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದು, ಇಲ್ಲಿನ ಮೂಲಭೂತವಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದರು. *ಟೌನ್ ಶಿಪ್‌ಗೆ ತೀವ್ರ ವಿರೋಧ* ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿಯಲ್ಲಿರುವ ಕೃಷಿಕರ ಫಲವತ್ತಾದ ಭೂಮಿಯನ್ನು ಟೌನ್‌ಶಿಪ್‌ಗೆ ಬಳಕೆ ಮಾಡುವುದನ್ನು ಭಾರತೀಯ ಕಿಸಾನ್ ಸಂಘ ತೀವ್ರವಾಗಿ ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು. 2027 ರಲ್ಲಿ ಸಂಘ ಸದಸ್ಯತ್ವ ಆಂದೋಲನವನನ್ನು ಹಮ್ಮಿಕೊಳ್ಳಲಿದ್ದು, ಗ್ರಾಮ ಮಟ್ಟದಿಂದ ತಲಾ 10 ರೂ.ಗೆ ಸದಸ್ಯತ್ವವನ್ನು ನೀಡುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ ಸಂಘ ರಾಷ್ಟ್ರದ 73 ಸಾವಿರ ಗ್ರಾಮೀಣ ಭಾಗಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ ಎಂದು ಸಾಯಿ ರೆಡ್ಡಿ ತಿಳಿಸಿದರು. ಭಾರತೀಯ ಕಿಸಾನ್ ಸಂಘದ ಕೊಡಗು ಜಿಲ್ಲಾ ಘಟಕದ ಸಲಹೆಗಾರ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ಜಿಲ್ಲೆಯ ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಕಿಸಾನ್ ಸಂಘ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈಗಾಗಲೆ ಕಾಡಾನೆ ಹಾವಳಿ ತಡೆಗೆ ಸಂಬಂಧಿಸಿದಂತೆ ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಇದನ್ನು ಪಡರಿಗಣಿಸಿ ಸರಕಾರ ವನ್ಯಜೀವಿ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕೊಡಗಿನ ಕಾಫಿ ಬೆಳೆಗಾರರಿಗೆ ತಾವು ಬೆಳೆದ ಕಾಫಿಗೆ ಉತ್ತಮ ಧಾರಣೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯ ಫಾಮರ‍್ಸ್ ಪ್ರೊಡ್ಯೂಸಿಂಗ್ ಆರ್ಗನೈಸೇಷನ್(ಎಫ್‌ಪಿಒ) ಸ್ಥಾಪನೆಗೆ ಅವಕಾಶಕ್ಕಾಗಿ ಸಂಘದ ಮೂಲಕ ಕೇಂದ್ರದ ಕೃಷಿ ಸಚಿವರ ಬಳಿಗೆ ನಿಯೋಗ ತೆರಳುವುದಾಗಿ ತಿಳಿಸಿದರು. ಸಂಘದ ರಾಷ್ಟ್ರೀಯ ನಿರ್ದೇಶಕ ವಾಸುದೇವರಾವ್ ಅವರು ಮಾತನಾಡಿ, ಪ್ರಸ್ತುತ ಕಾಫಿ ಉದ್ಯಮದಲ್ಲಿ ವರ್ಷಪೂರ್ತಿ ಕೃಷಿ ನಡೆಸುವ ಬೆಳೆಗಾರನ ಬದಲಾಗಿ, ಕಾಫಿ ಮಾರಾಟಗಾರರು, ರಫ್ತು ದಾರರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ. ಕೃಷಿಯನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಬೆಳೆಗಾರನಿಗೆ ಉತ್ತಮ ಧಾರಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘ ಕಾರ್ಯಪ್ರವೃತ್ತವಾಗಲಿದೆ ಎಂದರು. ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಭಗವಾನ್ ಅವರು ಮಾತನಾಡಿ, ಸಿ ಮತ್ತು ಡಿ ಭೂಮಿಯನ್ನು ಅರಣ್ಯವೆಂದು ಗುರುತಿಸಿ, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕ್ರಮ ಸರಿಯಲ್ಲ. ಈಗಾಗಲೆ ಸಿ ಮತ್ತು ಡಿ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡವರಿಗೆ ಆ ಜಾಗವನ್ನು ನೀಡಬೇಕೆಂದು ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಪ್ರವೀಣ್ ಭೀಮಯ್ಯ ಹಾಗೂ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.








