


ಸುಂಟಿಕೊಪ್ಪ ಜೂ.24 NEWS DESK : ಯುವ ಪೀಳಿಗೆ ದುಶ್ಚಟಗಳಿಗೆ ಸಿಲುಕಿ ತಮ್ಮ ಬದುಕನ್ನು ವಿನಾಶಗೊಳಿಸಿಕೊಳ್ಳುತ್ತಿರುವುದು ಅಘಾತಕಾರಿ ಸಂಗತಿ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅನಂತ್‍ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸುಂಟಿಕೊಪ್ಪದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಮಾದಕ ವಸ್ತು ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವ ಪೀಳಿಗೆಯು ಮಾದಕ ದ್ರವ್ಯ, ಧೂಮಪಾನ ಹಾಗೂ ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗಿ ಬಲಿಯಾಗುತ್ತಿರುವುದು ಪೋಷಕರಿಗೂ ಸಮಾಜಕ್ಕೂ ಆತಂಕಕಾರಿ ವಿಚಾರವಾಗಿದೆ. ಇದನ್ನು ತಡೆಯಲು ಮತ್ತು ಅವುಗಳಿಂದ ಆರೋಗ್ಯ ಹಾಗೂ ಭವಿಷ್ಯದ ಮೇಲಾಗುವ ಭೀಕರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಡಲಾಯಿತು. ಮಾದಕ ವಸ್ತುಗಳ ಬಳಕೆಯ ವಿರುದ್ಧ ಧ್ವನಿ ಎತ್ತುಬೇಕು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ದೇಶಕ್ಕೆ ಮತ್ತು ಪೋಷಕರಿಗೆ ಕೀರ್ತಿ ತರುವ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುಬೇಕೆಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಸುನೀತಾ ಗಿರೀಶ್, ಈಶ, ಪೊಲೀಸ್ ಪೇದೆಗಳಾದ ಸುದೀಶ್ ಕುಮಾರ್, ರಮೇಶ್ ಬಿರದಾರ್, ಮಹಿಳಾ ಪೇದೆ ದಿವ್ಯ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









