
ಸುಂಟಿಕೊಪ್ಪ ಜೂ.24 NEWS DESK : ವಿದ್ಯುತ್ ಕಂಬದ ವ್ಯವಸ್ಥೆ ಹಾಗೂ ಬಸ್ ತಂಗುದಾಣವನ್ನು ಕೆದಕಲ್ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಸಂಜು ಪೊನ್ನಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸುವ ಮೂಲಕ ಜನಸೇವೆಗೆ ಮಾದರಿಯಾಗಿದ್ದಾರೆ. ಕೆದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳನೇ ಮೈಲಿನ ವಿಕ್ರಂ ಬಡಾವಣೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ವಿದ್ಯುತ್ ಕಂಬ ಇಲ್ಲದೇ ಆ ಭಾಗದ ನಿವಾಸಿಗಳಿಗೆ ಸಂಚರಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡ ಸಂಜು ಪೊನ್ನಪ್ಪ ಅವರು ಕೂಡಲೇ ಸೆಸ್ಕ್ ಇಲಾಖೆಯೊಂದಿಗೆ ಚರ್ಚಿಸಿ ಕೂಡಲೇ ರೂ.40 ಸಾವಿರ ವೆಚ್ಚದಲ್ಲಿ ವಿದ್ಯುತ್ ಕಂಬ ಅಳವಡಿಸುವ ಮೂಲಕ ನಿವಾಸಿಗಳಿಗೆ ದಾರಿದೀಪರಾಗಿದ್ದಾರೆ. ಕೆದಕಲ್ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಂದಾಜು ರೂ.60 ಸಾವಿರ ವೆಚ್ಚದಲ್ಲಿ ಕೆದಕಲ್-ಹೊರೂರು ಮೊದ್ದೂರು ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಂಜು ಪೊನ್ನಪ್ಪ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಕೆದಕಲ್ ಗ್ರಾಮದ ನಿವಾಸಿಗಳಾದ ಬಿ.ಆರ್.ಸಂತೋಷ್ (ದಿನು), ಸತೀಶ್ ಪೂಜಾರಿ, ಮೋಂತು ಡಿಸೋಜ, ಡಾಲು, ಮನು, ಬಾಲ, ಜೀವನ್ ಸೇರಿದಂತೆ ಇತರರು ಅವರನ್ನು ಸನ್ಮಾನಿಸಿ ಗೌರವಿಸಿದರು.









