
ಮಡಿಕೇರಿ NEWS DESK ಜೂ.25 : ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಹಣ ದುರುಪಯೋಗವಾಗಿದೆ ಮತ್ತು ಅನರ್ಹರ ಪಾಲಾಗಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಕೊಡಗು ಜಿಲ್ಲೆಯಲ್ಲೂ ನಡೆದಿರಬಹುದಾದ ಇಂತಹ ಪ್ರಕರಣಗಳ ಬಗ್ಗೆ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಂಕಿ ಅಂಶ ಸಹಿತ ಸತ್ಯವನ್ನು ಜನರೆದುರು ಬಹಿರಂಗ ಪಡಿಸಬೇಕೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗೃಹಲಕ್ಷ್ಮಿ ಯೋಜನೆಗೆ ಸಂಬoಧಿಸಿದoತೆ ಸೋರಿಕೆ ತಡೆಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಷ್ಕರಣೆಯ ಅಸ್ತ್ರ ಬಳಸಿದ್ದಾರೆ. ಇದನ್ನು ಗಮನಿಸಿದರೆ ಅವರಿಗೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸಂದಾಯವಾದ ಹಣದ ಬಗ್ಗೆ ಸಂಶಯ ವ್ಯಕ್ತವಾದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ. ನೂತನ ಸಿಎಂ ಪರಿಷ್ಕರಣೆಯ ನಿರ್ಧಾರ ಕೈಗೊಂಡಿರುವುದನ್ನು ನೋಡಿದರೆ ಈ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಂತೆ ಕಂಡು ಬರುತ್ತಿದೆ. ರಾಜ್ಯದ ವಿವಿಧೆಡೆ ಅಪಾರ ಹಣ ಅನರ್ಹರ ಪಾಲಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಅನರ್ಹರ ಅಥವಾ ಮೃತಪಟ್ಟರ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಬಹಿರಂಗವಾಗಿಲ್ಲ. ಸರಕಾರ ನೇಮಕ ಮಾಡಿರುವ ಜಿಲ್ಲಾ ಮತ್ತು ತಾಲ್ಲೂಕುವಾರು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಗಳು ಸೂಕ್ತ ಮಾಹಿತಿ ನೀಡುವ ಮೂಲಕ ಜನರಲ್ಲಿರುವ ಗೊಂದಲವನ್ನು ನಿವಾರಿಸಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಸರಕಾರ ಮಾಸಿಕ ವೇತನ ಮತ್ತು ಎಲ್ಲಾ ಸೌಲಭ್ಯಗಳನ್ನು ನೀಡಿ ಅನುಷ್ಠಾನ ಸಮಿತಿಗಳನ್ನು ನೇಮಕ ಮಾಡಿವೆ. ಆದರೆ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಅನರ್ಹರ ಪಾಲಾಗಿರುವುದನ್ನು ಗಮನಿಸಿದರೆ ಈ ಅನುಷ್ಠಾನ ಸಮಿತಿಗಳ ಕಾರ್ಯ ವೈಖರಿಯ ಬಗ್ಗೆ ಸಂಶಯ ಮೂಡುತ್ತದೆ. ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿಯ ಕುರಿತು ಮಾಹಿತಿ ಪಡೆಯುವ ಸಮಿತಿಯ ಅಧ್ಯಕ್ಷರುಗಳು ಯೋಜನೆಯ ಹಣ ಅನರ್ಹರ ಪಾಲಾಗುತ್ತಿರುವುದನ್ನು ಯಾಕೆ ಗಮನಿಸಲಿಲ್ಲವೆಂದು ರಾಕೇಶ್ ದೇವಯ್ಯ ಪ್ರಶ್ನಿಸಿದ್ದಾರೆ. ಅಧಿಕಾರಕ್ಕೆ ಬರಬೇಕೆನ್ನುವ ಏಕೈಕ ಉದ್ದೇಶದಿಂದ ಆರ್ಥಿಕ ಹೊರೆಯ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಅನುದಾನ ಕ್ರೋಢೀಕರಣ ಮಾಡುವಲ್ಲಿ ವಿಫಲವಾಗಿದೆ. ಆರ್ಥಿಕ ಹೊರೆಯನ್ನು ಸಹಿಸಲಾಗದ ಸರಕಾರ ಇದೀಗ ಪರಿಷ್ಕರಣೆಯ ಅಸ್ತçವನ್ನು ಪ್ರಯೋಗಿಸಿ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ. ಸರಕಾರ ಮಾಡಿದ ಸ್ವಯಂಕೃತ ಅಪರಾಧಕ್ಕೆ ಜನಸಾಮಾನ್ಯರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಜನರಿಗೆ ತೊಂದರೆ ನೀಡುವುದನ್ನು ಬಿಟ್ಟು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಗಳನ್ನು ತನಿಖೆಗೆ ಒಳಪಡಿಸಬೇಕು. ಸಮಿತಿಯ ಅಧ್ಯಕ್ಷರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.








