
ಮಡಿಕೇರಿ NEWS DESK ಜೂ.30 : ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಪ್ರಕರಣ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಜಾಥಾ ನಡೆಯಿತು. ಕುಶಾಲನಗರದ ವಿವಿಧ ಸಂಘಸಂಸ್ಥೆಗಳು, ವಿವಿಧ ಸಮುದಾಯ ಬಾಂಧವರು ಜಾಥಾದಲ್ಲಿ ಪಾಲ್ಗೊಂಡು ಧರ್ಮ ರಕ್ಷಣೆ ಕಹಳೆ ಮೊಳಗಿಸಿದರು. ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿತು. ನಂತರ ಪಟ್ಟಣದ ಕಾರು ನಿಲ್ದಾಣ ಆವರಣದಲ್ಲಿ ಬೃಹತ್ ಸಭೆ ನಡೆಸಿತು. ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನ ಜಾಥಾದಲ್ಲಿ ಪ್ರಕರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ಕುಶಾಲನಗರ ಕಾವೇರಿ ನಿಸರ್ಗಧಾಮ ಮುಂಭಾಗದಿಂದ ಕೇಸರಿ ಧ್ವಜ ಹಿಡಿದು ಶಲ್ಯ ಧರಿಸಿ ಧರ್ಮ ಪರ ಘೋಷಣೆಗಳೊಂದಿಗೆ ಹೆದ್ದಾರಿಯಲ್ಲಿ ಬೃಹತ್ ಜಾಗೃತಿ ಜಾಥಾ ಸಾಗಿ ಬಂತು. ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತಿತರ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಂದ್ ಮಾಡಿ ವರ್ತಕರು, ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಜಾಥಾ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ವರ್ತಕರು ಸ್ವಯಂಪ್ರೇರಣೆಯಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ಔಷಧಿ ಅಂಗಡಿಗಳು ಹಣ್ಣಿನ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ವಾಹನಗಳು ಯಾವುದೇ ತೊಡಕಿಲ್ಲದೆ ಸಾಗಿದವು. ಬೆರಳೆಣಿಕೆಯ ಅಂಗಡಿಗಳು ತೆರೆದು ವಹಿವಾಟು ನಡೆಸಿದ ದೃಶ್ಯಗಳು ಗೋಚರಿಸಿತು. ಪ್ರಮುಖ ವಾಣಿಜ್ಯ ಬೀದಿ ರಥಬೀದಿ ರಸ್ತೆಯಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಸಂಪೂರ್ಣ ಅಂಗಡಿಗಳು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿವೈಎಸ್ಪಿ, 5 ಮಂದಿ ಇನ್ಸ್ ಪೆಕ್ಟರ್, 10 ಎಸ್.ಐ ಒಳಗೊಂಡಂತೆ 150 ಕ್ಕೂ ಅಧಿಕ ಮಂದಿಯ ಪೊಲೀಸ್ ಸಿಬ್ಬಂದಿಗಳ ಪಡೆ ತೀವ್ರ ನಿಗಾ ವಹಿಸಿತ್ತು. *ಸಭಾ ಕಾರ್ಯಕ್ರಮ* ಕಾರು ನಿಲ್ದಾಣದ ವೇದಿಕೆಯಲ್ಲಿ ನಡೆದ ಜನಾಂದೋಲನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕರು ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣ ಮಾಡಿದರು. ಜಾತಿ, ಮತ, ಪಕ್ಷ, ಪ್ರಾಂತ ಬೇಧ ಮರೆತು ಹಿಂದೂಗಳು ಒಂದಾದರೆ ಮಾತ್ರ ಮತಾಂತರಕ್ಕೆ ಕಡಿವಾಣ ಹಾಕಬಹುದು ಎಂದರು. ಹಿಂದೂ ಸಮಾಜ ಉಳಿದಿರುವುದೇ ಮಹಿಳೆಯರಿಂದ ಪ್ರತಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ದೇಶದ ಹಿರಿಮೆ ಹೇಳುವ ಕತೆ ಹೇಳಬೇಕು. 1995ರಲ್ಲೇ ಕೊಡಗು ಜಿಲ್ಲೆಯಲ್ಲಿ ಲವ್ ಜಿಹಾದ್ ಶುರುವಾಗಿದೆ. ವೀರ ಸೇನಾನಿಗಳ ನಾಡಿನಲ್ಲಿ ಇಂತಹ ಹುನ್ನಾರ ಹೇಗೆ ಶುರುವಾಯಿತು ಎನ್ನುವುದು ಚಿಂತಿಸಬೇಕು. ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ನಾವೆಲ್ಲರೂ ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎಂಬ ಮನೋಭಾವ ಎಲ್ಲರಿಗೂ ಬರಬೇಕು ಎಂದರು. ರಾಜಕಾರಣಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತುಷ್ಠೀಕರಣ ಮಾಡಬಾರದು ಎಂದು ಸಲಹೆ ನೀಡಿದರು. ಎಲ್ಲಾ ಮುಸ್ಲಿಂ, ಕ್ರಿಶ್ಚಿಯನ್ನರು ಕೆಟ್ಟವರಲ್ಲ. ವಂದೇ ಮಾತರಂ, ರಾಷ್ಟ್ರಗೀತೆಗೆ ಗೌರವ ಕೊಡದವರು ಮಾತ್ರ ರಾಷ್ಟ್ರದೋಹಿಗಳಂತೆ ಭಾಸವಾಗುತ್ತಿದ್ದಾರೆ ಎಂದ ಅವರು, ನಮ್ಮ ವೀರ ರಕ್ತದ ಪರಿಚಯ ಇರುವವರು ಮತಾಂತರ ಆಗುವುದಿಲ್ಲ. ಧರ್ಮದ ಮೇಲೆ ನಿಷ್ಠೆ ಹೊಂದಬೇಕು ಎಂದರು. ಜನಾಂದೋಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಬಿ.ಅಮೃತ ರಾಜ್ ಮಾತನಾಡಿ, ಮತಾಂತರದ ವಿರುದ್ಧ ಜಾಗೃತಿ ಜಾಥಾ ಯಾವುದೇ ಒಂದು ವರ್ಗದ ವಿರುದ್ದ ಅಲ್ಲ. ಈ ಪಿಡುಗಿಗೆ ಬಡವರು, ಶ್ರೀಮಂತರು ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿದ್ದ ಮತಾಂತರ ಪ್ರಕರಣ ಇದೀಗ ಕೊಡಗು ಜಿಲ್ಲೆಗೂ ಕಾಲಿಟ್ಟಿದೆ. ಭಾರತೀಯರು ಸಂವೇದನಾಶೀಲರು, ಹಾಗಾಗಿ ಮತಾಂತರ ಪ್ರಕರಣಗಳು ಹೆಚ್ಚು ಹೊರಗೆ ಬರುತ್ತಿಲ್ಲ. ಮತಾಂತರ ವಿರುದ್ದ ಹೋರಾಟ ಮುಂದುವರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಹಿಂದೂ ಜಾಗರಣ ವೇದಿಕೆಯ ಮುಖಂಡ ಭರತ್ ಮಾಚಯ್ಯ, ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿದರು. ಜನಾಂದೋಲನ ಸಹ ಸಂಚಾಲಕರಾದ ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ್ ಹೇರೂರು, ಜ್ಯೋತಿ ಕುದುಪಜೆ, ವಿ.ಹೆಚ್.ಪ್ರಶಾಂತ್ ಮತ್ತಿತರರು ವೇದಿಕೆಯಲ್ಲಿದ್ದರು.










