
ಮಡಿಕೇರಿ ಜು.9 NEWS DESK : ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಪೂರಕವಾಗಿ ಇದೇ ಜು.11 ಮತ್ತು 12ರಂದು ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಎಸ್‍ಎಸ್‍ಎಫ್ ಮಡಿಕೇರಿ ಡಿವಿಷನ್‍ನಿಂದ 14ನೇ ಆವೃತ್ತಿಯ “ಸಾಹಿತ್ಯೋತ್ಸವ-2026” ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್‍ಎಸ್‍ಎಫ್ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಸಾಹಿತ್ಯೋತ್ಸವದಲ್ಲಿ ಮೂರು ಸೆಕ್ಟರ್‍ಗಳು ಪಾಲ್ಗೊಳ್ಳಲಿವೆ. ಎಮ್ಮೆಮಾಡು ಸೆಕ್ಟರ್ ವ್ಯಾಪ್ತಿಯ ಎಮ್ಮೆಮಾಡು ಸೆಂಟರ್, ಎಮ್ಮೆಮಾಡು ಈಸ್ಟ್, ಎಮ್ಮೆಮಾಡು ವೆಸ್ಟ್, ಪಡಿಯಾಣಿ, ಸಾದತ್ ನಗರ, ಅಯ್ಯಂಗೇರಿ, ತಾವೂರು, ಚೆಟ್ಟಿಮಾನಿ ಹಾಗೂ ಪಳ್ಳಿರಾಣೆ ಘಟಕಗಳು, ನಾಪೋಕ್ಲು ಸೆಕ್ಟರ್ ವ್ಯಾಪ್ತಿಯ ಕುಂಜಿಲ, ಕೊಳಕೇರಿ, ಹಳೇ ತಾಲ್ಲೂಕು, ನಾಪೋಕ್ಲು, ಚೆರಿಯಪರಂಬು, ಕೊಟ್ಟಮುಡಿ, ಹೊದವಾಡ, ಬೆಟ್ಟಗೇರಿ ಹಾಗೂ ಚರಂಬಾಣೆ ಘಟಕಗಳು ಹಾಗೂ ಮಡಿಕೇರಿ ಸೆಕ್ಟರ್ ವ್ಯಾಪ್ತಿಯ ಬೇತ್ರಿ, ಬಲಮುರಿ, ಮೂರ್ನಾಡು, ಕೊಂಡಂಗೇರಿ ಈಸ್ಟ್, ಕೊಂಡಂಗೇರಿ ವೆಸ್ಟ್, ಕೊಂಡಂಗೇರಿ ನಾರ್ತ್, ಐಕೊಳ, ಹಾಕತ್ತೂರು, ಕಬ್ಬಡಕೇರಿ ಹಾಗೂ ಮಡಿಕೇರಿ ಘಟಕಗಳು ಸೇರಿಂದತೆ ಒಟ್ಟಾಗಿ 28 ಘಟಕಗಳು ಭಾಗವಹಿಸಲಿರುವುದಾಗಿ ಮಾಹಿತಿ ನೀಡಿದರು. ಸಾಹಿತ್ಯೋತ್ಸವದಲ್ಲಿ ಪ್ರಮುಖವಾಗಿ ಭಾಷಣ, ಪ್ರಬಂಧ, ಕವನ, ಕಥೆ, ರಸಪ್ರಶ್ನೆ, ಚಿತ್ರಕಲೆ, ಕ್ಯಾಲಿಗ್ರಫಿ, ವಾಚನ, ಭಾಷಾಂತರ, ವೇದಿಕೆ ಕಾರ್ಯಕ್ರಮಗಳು ಹಾಗೂ ವಿವಿಧ ಸಾಹಿತ್ಯ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿರುವುದಾಗಿ ತಿಳಿಸಿದರು. :: ಸಾಹಿತ್ಯಾಸಕ್ತಿ ಮೂಡಿಸಲು ಕಾರ್ಯಕ್ರಮ :: ಪ್ರಸ್ತುತ ಸಮಾಜದಲ್ಲಿ ಯುವ ಸಮೂಹ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಪುಸ್ತಕಗಳತ್ತ, ಸಾಹಿತ್ಯ ಮತ್ತು ಉತ್ತಮ ಮೌಲ್ಯಗಳತ್ತ ಕೊಂಡೊಯ್ಯುವ ಪ್ರಯತ್ನವಾಗಿ ಸಾಹಿತ್ಯೋತ್ಸವ ಆಯೋಜಿತವಾಗಿದೆಯೆಂದರು. ಸಾಹಿತ್ಯೋತ್ಸವವು ಕೇವಲ ಸ್ಪರ್ಧೆಯಲ್ಲ, ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಹಬ್ಬವಾಗಿದೆ. ಇಲ್ಲಿ ಗೆಲುವು ಅಥವಾ ಸೋಲು ಮುಖ್ಯವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಸ ಅನುಭವ, ಹೊಸ ಆತ್ಮವಿಶ್ವಾಸ ಮತ್ತು ಹೊಸ ಪ್ರೇರಣೆಯೊಂದಿಗೆ ಮನೆಗೆ ಮರಳುವುದು ನಮ್ಮ ಗುರಿಯಾಗಿದೆಯೆಂದು ಹೇಳಿದರು. ಗೋಷ್ಠಿಯಲ್ಲಿ ಎಸ್‍ಎಸ್‍ಎಫ್ ಮಡಿಕೇರಿ ವಿಭಾಗದ ಅಧ್ಯಕ್ಷರಾದ ಹಾರಿಸ್ ಝುಹ್ರಿ, ಸಾಹಿತ್ಯೋತ್ಸವದ ಮಡಿಕೇರಿ ಘಟಕದ ಸಂಯೋಜಕರಾದ ಅಯ್ಯಂಗೇರಿಯ ಮುಹಮ್ಮದ್ ರಾಫಿ ಹಿಮಾಮಿ ಸಖಾಫಿ, ಪ್ರಧಾನ ಕಾರ್ಯದರ್ಶಿ ಜುನೈದ್ ಬೇತ್ರಿ, ಕೋಶಾಧಿಕಾರಿ ಜುಬೈರ್ ನಾಪೋಕ್ಲು, ಮಡಿಕೇರಿ ವಿಭಾಗದ ಸಾಹಿತ್ಯೋತ್ಸವದ ಚೇರ್‍ಮನ್ ಜಂಷೀರ್ ಸಖಾಫಿ ಉಪಸ್ಥಿತರಿದ್ದರು.









