
ಸುಂಟಿಕೊಪ್ಪ ಜು.9 NEWS DESK : ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನ ಮಾಹಿತಿ ಕಾರ್ಯಾಗಾರ ನಡೆಯಿತು. ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ವಿಶ್ವಜ್ಞ ಮಾತನಾಡಿ, ಡೆಂಗ್ಯೂ ಜ್ವರವು ಈಡೀಸ್ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದು ವೈರಸ್ ನಿಂದ ಉಂಟಾಗುವ ಕಾಯಿಲೆ ಎಂದು ತಿಳಿಸಿದರು. ನಿಂತ ನೀರು ಸೊಳ್ಳೆಗಳ ತವರೂರು ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯನ್ನು ಮಾಡುತ್ತವೆ ಸೋಂಕಿತ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಗಳು ಹರಡುತ್ತವೆ. ಈ ರೋಗದ ಲಕ್ಷಣವೆಂದರೆ ವಿಪರೀತ ಜ್ವರ ಮೈ ಕೈ ನೋವು, ತಲೆನೋವು ಕಣ್ಣುಗುಡ್ಡೆಗಳ ಹಿಂಭಾಗ ನೋವು, ಮೈಮೇಲೆ ಕೆಂಪು ಗುಳ್ಳೆಗಳಾಗುವುದು ಉಂಟಾಗುತ್ತದೆ ಡೆಂಗ್ಯೂ ಜ್ವರವು ಮಾರಣಾಂತಿಕ ಖಾಯಿಲೆಯಾಗಿದ್ದು, ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ ರೋಗದ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದರು. ಈ ರೋಗ ಹರಡದಂತೆ ತಡೆಗಟ್ಟಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಯಾವುದೇ ನೀರಾದರೂ ಅದನ್ನು ಸುರಕ್ಷಿತವಾಗಿ ಮುಚ್ಚಿಡಬೇಕು ವಾರಕ್ಕೆ ಎರಡು ಬಾರಿ ಎಲ್ಲಾ ನೀರಿನ ಸಂಗ್ರಹಗಳನ್ನು ತೊಳೆದು ಉಜ್ಜಿ ಒಣಗಿಸಿ ನೀರು ತುಂಬಿಸಿ ಮುಚ್ಚಿಡಬೇಕು. ಹಾಗೂ ಘನತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ ತೆಂಗಿನ ಚಿಪ್ಪು ಟೈಯರ್ ಗಳು ಇತ್ಯಾದಿ ನೀರು ಸಂಗ್ರಹಗಳನ್ನು ತೆರವುಗೊಳಿಸಬೇಕು ಎಂದು ಅವರು ಮಾಹಿತಿ ನೀಡಿದರು. ಹಾಗೆಯೇ ಮನೆಯಲ್ಲಿ ಸ್ವಯಂ ರಕ್ಷಣಾ ವಿಧಾನಗಳಾದ ಮೈತುಂಬಾ ಬಟ್ಟೆ ಧರಿಸುವುದು, ಕಿಟಕಿ ಬಾಗಿಲುಗಳನ್ನು ಮುಚ್ಚುವುದು ಎಂದು ತಿಳಿಸಿದರು. ಡೆಂಗ್ಯೂ ಜ್ವರವು ಮಾರಣಾಂತಿಕ ಖಾಯಿಲೆ ಆಗಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಅಲ್ಲದೆ ನಿಮ್ಮಲ್ಲಿ ಇಂತಹ ರೋಗದ ಲಕ್ಷಣಗಳು ಕಂಡು ಕೂಡಲೇ ಆರೋಗ್ಯ ಕೇಂದ್ರಗಳಿಗೆ ವೈಧ್ಯರೊಂದಿಗೆ ಪರೀಕ್ಷೆಗೆ ಒಳಗೊಂಡು ಚಿಕಿತ್ಸೆ ಪಡೆಯಬೇಕೆಂದು ಅವರು ಹೇಳಿದರು. ನಂತರ ಹೆಚ್‍ಪಿವಿ ವ್ಯಾಕ್ಸಿನೇಷನ್, ರಾಷ್ಟ್ರೀಯ ಕ್ಷಯರೋಗ, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದ ಬಗ್ಗೆ, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮತ್ತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಜಿಲ್ಲಾ ಆಶಾ ಮೇಲ್ವಿಚಾರಕರಾದ ಐರಿನ್, ಪ್ರಾಥಮಿಕ ಸುರಕ್ಷತಾಧಿಕಾರಿಗಳಾದ ಯೋಗಿನಿ, ಶಿಕ್ಷಕರುಗಳಾದ ಪ್ರಕಾಶ್, ಜಯಶ್ರೀ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆ ಗೀತಾಂಜಲಿ, ಬಿ.ಜಿ.ಗೀತಾ, ದಿವ್ಯಶ್ರೀ, ಟಿ.ಕೆ.ಪ್ರಸಿದ್ಧ ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.









