
ಮಡಿಕೇರಿ ಜು.16 NEWS DESK : ಅಯೋಧ್ಯೆಯ ಶ್ರೀ ರಾಮ ಮಂದಿರದ ದೇಣಿಗೆ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರೀ ರಾಮ ಮಂದಿರದ ದೇಣಿಗೆ ಹಣವನ್ನು ದುರುಪಯೋಗಪಡಿಸಿ ಕೋಟ್ಯಾಂತರ ರಾಮ ಭಕ್ತರ ಭಾವನೆಗೆÉ ದಕ್ಕೆ ತರಲಾಗಿದೆ. ಭಕ್ತರ ಭಾವನೆಯನ್ನೇ ಬಂಡವಾಳ ಮಾಡಿಕೊಂಡು ಹಣ ದೋಚಿದ ಪ್ರಕರಣದಿಂದ ಇಡೀ ದೇಶವೇ ತಲೆ ತಗ್ಗಿಸುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ವಿಚಾರಗಳನ್ನು ಮನದ ಮಾತಿನ ಮೂಲಕ ಮಾತನಾಡುವ ದೇಶದ ಪ್ರಧಾನಮಂತ್ರಿಗಳು ಶ್ರೀ ರಾಮನ ಹೆಸರಿನಲ್ಲಿ ನಡೆದಿರುವ ಅನ್ಯಾಯದ ವಿರುದ್ಧವೂ ಮಾತನಾಡುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೋಟ್ಯಾಂತರ ರಾಮ ಭಕ್ತರು ಪಕ್ಷ, ಜಾತಿ, ಮತ ಭೇದ ಮರೆತು ರಾಮನ ಮಂದಿರ ನಿರ್ಮಾಣಕ್ಕಾಗಿ ತನು, ಮನ, ಧನವನ್ನು ಸಮರ್ಪಿಸಿದ್ದಾರೆ. ಆದರೆ ಮುಖವಾಡ ತೊಟ್ಟ ವಂಚಕರು ಭಕ್ತರ ಹಣವನ್ನೇ ಲೂಟಿ ಮಾಡಿದ್ದಾರೆ. ಇದು ಕೇವಲ ರಾಮ ಭಕ್ತರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಯಾವುದೇ ಒತ್ತಡ ಅಥವಾ ಸ್ವಜನ ಪಕ್ಷಪಾತಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಶ್ರೀ ರಾಮ ಮಂದಿರದ ಆಡಳಿತದಲ್ಲಿ ದಕ್ಷತೆಯನ್ನು ಮೂಡಿಸುವ ಮೂಲಕ ಭಕ್ತರ ಭಾವನೆಯನ್ನು ಗೌರವಿಸಬೇಕು ಎಂದು ಟಿ.ಪಿ.ರಮೇಶ್ ಆಗ್ರಹಿಸಿದ್ದಾರೆ.









