
ಮಡಿಕೇರಿ NEWS DESK ಜು.19 : ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮ ಬೆಳೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿಯೊಂದು ಶಾಲೆ ಹಾಗೂ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳ ನೋಂದಣಿ ಕಡ್ಡಾಯವಾಗಿ ನಡೆಯಬೇಕು ಎಂದು ಜಿಲ್ಲಾ ಆಯುಕ್ತೆ ಬೇಬಿ ಮ್ಯಾಥ್ಯೂ ಹೇಳಿದರು. ಅವರು ಮಡಿಕೇರಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮಹಾಸಭೆಯ ನಡವಳಿಕೆಯನ್ನು ಸಭೆಯ ಮುಂದಿಟ್ಟರು. ಬಳಿಕ ಉಪಾಧ್ಯಕ್ಷೆ ನೀಲಮ್ಮ ಅವರು 2025–26ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾದ ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು. ನಂತರ ಖಜಾಂಚಿ ಶಾಂತಿ ಅವರು ವಾರ್ಷಿಕ ಆದಾಯ–ವೆಚ್ಚದ ಲೆಕ್ಕಪತ್ರವನ್ನು ಸಭೆಯ ಅನುಮೋದನೆಗೆ ಸಲ್ಲಿಸಿದರು. ಜಿಲ್ಲಾ ಸಂಸ್ಥೆಯ ಸಂಯೋಜಕರು ಹಾಗೂ ಮಡಿಕೇರಿ ನೋಡಲ್ ಅಧಿಕಾರಿ ಎಚ್.ಆರ್. ಮುತ್ತಪ್ಪ ಮಾತನಾಡಿ, ಮಡಿಕೇರಿ ಸ್ಥಳೀಯ ಸಂಸ್ಥೆಯು ಉತ್ತಮ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲೆಯ ಎಲ್ಲ ಶಾಲೆಗಳ ಶಿಕ್ಷಕರು ದಳ ನೋಂದಣಿಗೆ ಮುಂದಾಗಬೇಕು. ಇನ್ನೂ ನೋಂದಣಿ ಮಾಡದ ಶಾಲೆಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಜುಲೈ 24ರಿಂದ 30ರವರೆಗೆ ಕುಶಾಲನಗರ ಕೊಡವ ಸಮಾಜದಲ್ಲಿ ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್, ಕಬ್ಸ್ ಹಾಗೂ ಬುಲ್‌ಬುಲ್ಸ್ ವಿಭಾಗದ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಜಿಲ್ಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿ ತರಬೇತಿ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ಸಭೆಯಲ್ಲಿ ಜಿಲ್ಲಾ ಖಜಾಂಚಿ ಟಿ.ಎನ್. ಮುದ್ದಯ್ಯ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರು ರವಿ, ಕೊಂಪುಳೀರ ಮಮತಾ, ಸ್ಕೌಟ್ಸ್ ಸಹಕಾರ್ಯದರ್ಶಿ ಮಾಡಿಯಂಡ ಸೂರಜ್ ಕುಮಾರ್, ನಳಿನಿ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ. ಅವರು ನಿರೂಪಿಸಿದರು. ಉಪಾಧ್ಯಕ್ಷೆ ನೀಲಮ್ಮ ಸ್ವಾಗತಿಸಿದರು. ನಳಿನಿ ಅವರು ವಂದನಾರ್ಪಣೆ ಸಲ್ಲಿಸಿದರು.









