

ಮಡಿಕೇರಿ NEWS DESK ಜು.22 : ಮಡಿಕೇರಿ ನಗರದಂಚಿನ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಸರ ನಾಶ ಪಡಿಸಿ ಬಡಾವಣೆ ನಿರ್ಮಿಸುವ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಹಾಗೂ ಕಾವೇರಿ ಸಂರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆಯ ಅಧ್ಯಕ್ಷರು ಹಾಗೂ ಪರಿಸರವಾದಿ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಮಾತನಾಡಿ ಸುಮಾರು 94 ಏಕರೆ ಪ್ರದೇಶದಲ್ಲಿ ಬಡಾವಣೆೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಭೂ ಕಂದಾಯ ಕಾಯ್ದೆಯನ್ವಯ ಕೊಡಗಿನ ಗದ್ದೆ ಬಯಲು, ಹಸಿರ ಪರಿಸರಗಳಲ್ಲಿ ಭೂ ಪರಿವರ್ತನೆಗೆ ಅವಕಾಶವಿಲ್ಲವಾದರು, ಇಲ್ಲಿ ಭೂ ಪರಿವರ್ತನೆ ಮಾಡುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ. ಬಡಾವಣೆಯ ನಿರ್ಮಾಣಕ್ಕಾಗಿ 1500ಕ್ಕೂ ಹೆಚ್ಚಿನ ಮರಗಳನ್ನು ಧರೆಗುರುಳಿಸಲಾಗಿದೆ ಎಂದು ಆರೋಪಿಸಿದರು. ಒಂದೊಮ್ಮೆ ಇಲ್ಲಿ ಬಡಾವಣೆ ನಿರ್ಮಾಣವಾದಲ್ಲಿ, ಇಲ್ಲಿನ ಕಲುಷಿತ ನೀರು ನೇರವಾಗಿ ಮಡಿಕೇರಿಯ ಕುಡಿಯವ ನೀರಿನ ಪ್ರಮುಖ ಮೂಲವಾದ ಕೂಟುಹೊಳೆಗೆ ಸೇರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಬಡಾವಣೆ ನಿರ್ಮಾಣಕ್ಕೆ ಸಂಬ0ಧಿಸಿದ0ತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರನ್ನು ನೀಡಲಾಗಿದೆ. ಈ ಬಗ್ಗೆ ಸರಕಾರ ಹಾಗೂ ಸ್ಥಳೀಯ ಶಾಸಕ ಡಾ.ಮಂತರ ಗೌಡ ಅವರು ನಿಗಾ ವಹಿಸಿ, ಯೋಜನೆ ಜಾರಿ ಗೊಳ್ಳದಂತೆ ನೋಡಿಕೊಳ್ಳಬೇಕು. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಕರ್ನಲ್ ಸಿ.ಪಿ.ಮುತ್ತಣ್ಣ ಎಚ್ಚರಿಕೆ ನೀಡಿದರು.
ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ಮಾತನಾಡಿ, ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಜಿಲ್ಲೆಯ ಪರಿಸರಕ್ಕೆ ಧಕ್ಕೆ ತರುವ ಯಾವುದೇ ಯೋಜನೆಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಪ್ರದೀಪ್ ಕರ್ಕೆರ, ಲೀಲಾ ಶೇಷಮ್ಮ, ಕೊಡಗು ಹಾಗೂ ಕಾವೇರಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.









