
ಮಡಿಕೇರಿ ಜು.24 NEWS DESK : ಬಿಡದಿ ಟೌನ್‍ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ಕೊಡಗಿನಿಂದ ತೆರಳುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರನ್ನು ಜಿಲ್ಲೆಯ ಗಡಿಭಾಗದಲ್ಲೇ ಪೊಲೀಸರು ತಡೆದರು. ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮದಲ್ಲಿ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತರು ತಿತಿಮತಿ-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈ ಸಂದರ್ಭ ರೈತ ಸಂಘದ ಪ್ರಮುಖರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ರೈತ ಸಂಘದ ಮುಖಂಡರುಗಳಾದ ಸುಜಯ್ ಬೋಪಯ್ಯ ಹಾಗೂ ಸುಭಾಶ್ ಸುಬ್ಬಯ್ಯ ಅವರ ನೇತೃತ್ವದಲ್ಲಿ ಬಿಡದಿಗೆ ಹೊರಟಿದ್ದ ರೈತರನ್ನು ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಸಹಕಾರ ಭವನಕ್ಕೆ ಕರೆದೊಯ್ಯಲಾಯಿತು. ನಮ್ಮನ್ನು ಯಾಕೆ ಇಲ್ಲಿ ಕರೆದುಕೊಂಡು ಬಂದು ಕೂಡಿ ಹಾಕಿರುವುದು ಎಂದು ರೈತರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸುಜಯ್ ಬೋಪಯ್ಯ, ಸರಕಾರ ಬಿಡದಿಯಲ್ಲಿ ರೈತರ 1700 ಎಕರೆ ಭೂಮಿಯನ್ನು ವಶಕ್ಕೆ ಪಡೆದು ಅಲ್ಲಿನ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ. ಇದನ್ನು ಕೊಡಗು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಇದರ ಭಾಗವಾಗಿ ಬಿಡದಿಗೆ ಹೊರಟ ರೈತರನ್ನು ಜಿಲ್ಲೆಯಲ್ಲಿ ತಡೆದು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು. ಕಾನೂನು ಸುವ್ಯವಸ್ಥೆ ಹೆಸರಲ್ಲಿ ಪೊಲೀಸರು ಶಾಂತಿಯುತ ಹೋರಾಟಕ್ಕೆ ಹೊರಟ ರೈತರನ್ನು ತಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಮಧ್ಯಾಹ್ನದ ನಂತರ ಎಲ್ಲಾ ರೈತರನ್ನು ಬಿಡುಗಡೆಗೊಳಿಸಿದರು. *ಕೊಡ್ಲಿಪೇಟೆಯಲ್ಲಿ ವಶ* ಬಿಡದಿ ಕಡೆಗೆ ಹೊರಟಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರನ್ನು ಕೊಡ್ಲಿಪೇಟೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಕೊಡ್ಲಿಪೇಟೆ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೆಲವು ಸಮಯದ ನಂತರ ಪೊಲೀಸರು ರೈತ ಮುಖಂಡರನ್ನು ಬಿಡುಗಡೆಗೊಳಿಸಿದರು. ಪ್ರಮುಖರಾದ ಹೆಗ್ಗಳ ಹೂವಯ್ಯ, ಬಿ.ಪಿ.ಮೊಗಪ್ಪ, ದಿನೇಶ್, ರಮೇಶ್, ಜಿತೇಂದ್ರ, ನಾಗರಾಜ್, ಅಜಿತ್, ಅಶೋಕ್, ಲಕ್ಷ್ಮಣ, ಚಕ್ರವರ್ತಿ ಸುರೇಶ್, ದೀಪಕ್ ಪ್ರಸನ್ನ, ಕೇಶವಮೂರ್ತಿ, ಭಗವಾನ್, ಮೂದ್ರವಳ್ಳಿ ವಿನೋದ್, ಅನಂತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. *ಎಸ್‍ಪಿ ಗೆ ಮನವಿ* ಪೊಲೀಸರು ಬಿಡುಗಡೆಗೊಳಿಸಿದ ನಂತರ ಮಡಿಕೇರಿಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದ ರೈತ ಮುಖಂಡರು ಎಸ್‍ಪಿ ಆರ್.ಎನ್.ಬಿಂದುಮಣಿ ಅವರ ಸಮ್ಮುಖದಲ್ಲಿ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದರು. ನಿಯಮಬಾಹಿರವಾಗಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಕೊಡಗು ಜಿಲ್ಲೆಗೆ ಬೇರೆಯದ್ದೇ ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ರೈತರ ಪರವಾದ ಶಾಂತಿಯುತ ಹೋರಾಟಕ್ಕೆ ಬಿಡದಿಗೆ ತೆರಳುತ್ತಿದ್ದ ನಮ್ಮನ್ನು ತಡೆದು ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ ರೈತ ಮುಖಂಡರು ಎಸ್‍ಪಿಗೆ ಮನವಿ ಪತ್ರ ಸಲ್ಲಿಸಿದರು.









