

ವಿರಾಜಪೇಟೆ ಆ.15 NEWS DESK : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಆಗಮಿಸಿದ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಕ್ಷೇತ್ರದ ಹೆಬ್ಬಾಗಿಲು ಆನೆಚೌಕೂರು ಗೇಟ್ ಬಳಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಶಾಸಕರ ಆಗಮನದ ಹಿನ್ನೆಲೆಯಲ್ಲಿ ಆನೆಚೌಕೂರು ಗೇಟ್ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಶಾಸಕರನ್ನು ಕಂಡೊಡನೆ ಆತ್ಮೀಯವಾಗಿ ಅಭಿನಂದಿಸಿ, ಜಯಘೋಷಗಳನ್ನು ಕೂಗಿ ಕ್ಷೇತ್ರಕ್ಕೆ ಬರಮಾಡಿಕೊಂಡರು. ಶಾಸಕರ ಸಹೋದರ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಹಾಗೂ ಅಭಿಮಾನಿಗಳಾದ ಮಿದೇರಿರ ನವೀನ್, ಪಟ್ಟಡ ರಂಜಿ ಪೂಣಚ್ಚ, ಟಾಟು ಮೊಣ್ಣಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪೊನ್ನಣ್ಣ ಅವರಿಗೆ ಶುಭ ಹಾರೈಸಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಉತ್ಸಾಹದ ನಡುವೆ ಶಾಸಕರಿಗೆ ಆತ್ಮೀಯ ಸ್ವಾಗತ ದೊರೆಯಿತು.









