


ಕುಶಾಲನಗರ, ಆ.15 NEWS DESK : ಸೈನಿಕ ಶಾಲೆ ಕೊಡಗಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸೇನಾ ವೈಭವ ಹಾಗೂ ದೇಶಭಕ್ತಿಯ ಸಂಭ್ರಮದೊಂದಿಗೆ ಆಚರಿಸಲಾಯಿತು. ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್ ಅಧ್ಯಕ್ಷ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚೆಂಗಪ್ಪ (ನಿವೃತ್ತ), ಪಿವಿಎಸ್‌ಎಂ, ಎವಿಎಸ್‌ಎಂ, ವಿಎಸ್‌ಎಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಹಾಗೂ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮದ್ ಷಾಜಿ ಅವರು ಮುಖ್ಯ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಶಾಲೆಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಮೆನನ್, ಕಾರ್ಯಪ್ಪ, ಕಟಾರಿ ಹಾಗೂ ಸುಬ್ರತೋ ಹೌಸ್‌ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಪರೇಡ್ ಕಮಾಂಡರ್ ಕೆಡೆಟ್ ಸಿದ್ದಾಂತ್ ಹಾಗೂ ಧ್ವಜಧಾರಿ ಕೆಡೆಟ್ ಮಿತ್ರ ಅವರ ನೇತೃತ್ವದಲ್ಲಿ ಕೆಡೆಟ್‌ಗಳು ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ ಪ್ರದರ್ಶಿಸಿದರು. :: ಸಂಸ್ಥಾಪಕರಿಗೆ ಗೌರವ ನಮನ :: ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಗಣ್ಯರನ್ನು ಗೌರವಿಸುವ ಸಲುವಾಗಿ ಶಾಲೆಯ ಆಡಳಿತ ಭವನ ಕೌಟಿಲ್ಯ ಬ್ಲಾಕ್‌ನಲ್ಲಿ ಏರ್ ಮಾರ್ಷಲ್ ಚೆಂಗಪ್ಪ ಅವರು ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು. ಕೊಡಗು ಜಿಲ್ಲೆಯ ನಿವೃತ್ತ ಯೋಧರೊಂದಿಗೆ ಸಂಸ್ಥೆಯ ಆರಂಭಿಕ ಬೆಳವಣಿಗೆಗೆ ಕಾರಣೀಕರ್ತರಾದ ವಿಂಗ್ ಕಮಾಂಡರ್ ಅಪ್ಪಣ್ಣ (ನಿವೃತ್ತ), ಲೆಫ್ಟಿನೆಂಟ್ ಕರ್ನಲ್ ಕಾವೇರಿಯಪ್ಪ ಹಾಗೂ ಸಾರ್ಜೆಂಟ್ ನಂಜಪ್ಪ ಅವರ ಸೇವೆಯನ್ನು ಸ್ಮರಿಸಲಾಯಿತು. :: ಸಾಧಕ ವಿದ್ಯಾರ್ಥಿಗಳು, ಸಿಬ್ಬಂದಿಗೆ ಸನ್ಮಾನ :: 2025-26ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಎನ್‌ಡಿಎ ಪ್ರವೇಶ ಪಡೆದ ಕೆಡೆಟ್ ಹಾಲಚಂದ್ರ, ಶೈಕ್ಷಣಿಕ ವಿಭಾಗದ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಎನ್‌ಡಿಎ ಪ್ರವೇಶ ಪಡೆದ ಕೆಡೆಟ್ ಕಲ್ಲೇಶ್ ಬೇವಿನಾಳ್ ಹಾಗೂ ಕ್ರೀಡಾ ವಿಭಾಗದ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಕೆಡೆಟ್ ಹೃದಯ ಅವರಿಗೆ ನೀಡಿ ಗೌರವಿಸಲಾಯಿತು. ಸಿಬಿಎಸ್‌ಇ 10ನೇ ತರಗತಿಯಲ್ಲಿ ಶೇ.97.8 ಅಂಕ ಗಳಿಸಿ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ಕೆಡೆಟ್ ಗಗನ್ ದೀಪ್ ಆರ್., ಗಣಿತದಲ್ಲಿ 100ಕ್ಕೆ 100 ಅಂಕ ಪಡೆದ ಕೆಡೆಟ್ ಹೃಷಿಕೇಶ್ ರೂಗಿ ಹಾಗೂ ಕೃತಕ ಬುದ್ಧಿಮತ್ತೆ (AI) ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ಕೆಡೆಟ್ ಪ್ರಣವ್ ನರೇಂದ್ರ ರಾವ್, ಕೆಡೆಟ್ ಶಾಶ್ವತ್ ಸಿಂಗ್ ಮತ್ತು ಕೆಡೆಟ್ ಹಿಮಾಂಕ್ ಕುಮಾರ್ ಭಯಾನ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಬೋಧಕರಾದ ಎನ್. ಸುಬ್ಬರಂಗಯ್ಯ, ದಾದಾ ಡಿ. ಕುಸನಾಳೆ, ಗೋವಿಂದರಾಜ ಕೆ. ಹಾಗೂ ಹನುಮಂತ ರೆಡ್ಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು. ಇದೇ ವೇಳೆ ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಗಾಗಿ ಟಿಜಿಟಿ ವಿಜ್ಞಾನ ಶಿಕ್ಷಕ ಬಿ.ಎಲ್.ವಿ. ಪ್ರಸಾದ್ ರಾಜು, ಕ್ವಾರ್ಟರ್ ಮಾಸ್ಟರ್ ಸುನೀಲ್ ಕುಮಾರ್ ಇ. ಹಾಗೂ ಸಾಮಾನ್ಯ ನೌಕರ ಶ್ರೀನಿವಾಸ ಕೆ. ಅವರಿಗೆ ‘ಪ್ರಾಂಶುಪಾಲರ ಅಭಿನಂದನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಏರ್ ಮಾರ್ಷಲ್ ಚೆಂಗಪ್ಪ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು ಹಾಗೂ ಸಮರ್ಪಣಾ ಭಾವದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.









