
ವಿರಾಜಪೇಟೆ, ಆ.18 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ‘ಎಲ್‌ಎಸ್‌ಎ ಕೇರ್ಸ್’ ವತಿಯಿಂದ ಸಮಾಜಮುಖಿ ಸೇವಾ ಕಾರ್ಯಗಳ ಅಂಗವಾಗಿ ವಿದ್ಯಾರ್ಥಿಗಳಿಗೆ, ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ರೈನ್‌ಕೋಟ್ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ‘ಎಲ್‌ಎಸ್‌ಎ ಕೇರ್ಸ್’ ವತಿಯಿಂದ ಪ್ರತಿ ತಿಂಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯವಿರುವವರಿಗೆ ನೆರವು ಹಾಗೂ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿರಾಜಪೇಟೆಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ರೈನ್‌ಕೋಟ್‌ಗಳನ್ನು ವಿತರಿಸಿದರು. ಅದೇ ರೀತಿ ವಿರಾಜಪೇಟೆ ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರಿಗೂ ರೈನ್‌ಕೋಟ್‌ಗಳನ್ನು ವಿತರಿಸಿ ಅವರ ಸೇವೆಯನ್ನು ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜ ಸೇವಕಿ ಪೂಜಾ ಸಜೇಶ್, “ನಮ್ಮ ಶಿಕ್ಷಣ ಸಂಸ್ಥೆಯ ‘ಎಲ್‌ಎಸ್‌ಎ ಕೇರ್ಸ್’ ವತಿಯಿಂದ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದು ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ರೈನ್‌ಕೋಟ್ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಸೇರಿದಂತೆ ವಿವಿಧ ಸಮಾಜ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಸಹಾಯ ಹಾಗೂ ಸೇವಾ ಕಾರ್ಯಗಳನ್ನು ಮುಂದುವರಿಸಲಾಗುವುದು” ಎಂದರು. ‘ಕಲಿಕೆಯೊಂದಿಗೆ ಕಾಳಜಿ, ಸೇವೆಯೊಂದಿಗೆ ಸಂಸ್ಕಾರ’ ಎಂಬ ಆಶಯದಂತೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಕಲಿಕೆ, ಸೇವಾ ಮನೋಭಾವ ಹಾಗೂ ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರ ಪೂಣಚ್ಚ, ಕ್ಯಾಂಪಸ್ ನಿರ್ವಹಣಾಧಿಕಾರಿ ರಿಚರ್ಡ್, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









