
ಮಡಿಕೇರಿ NEWS DESK ಆ.21 : ರೋಟರಿ ಮಡಿಕೇರಿ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿ0ದ ಆಚರಿಸಲಾಯಿತು. ರಾಷ್ಟ್ರ ಧ್ವಜಾರೋಹಣದ ನಂತರ ರೋಟರಿ ಮಡಿಕೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶೌರ್ಯ ಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಅವರು ಯುವಜನರಲ್ಲಿ ದೇಶಸೇವೆ ಹಾಗೂ ರಕ್ಷಣಾ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಯುವಕರಿಗೆ ರಕ್ಷಣಾ ಪಡೆಗಳಿಗೆ ಸೇರುವ ಅವಕಾಶಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳನ್ನು ಕೂಡ ಆಯೋಜಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮಡಿಕೇರಿ ಅಧ್ಯಕ್ಷ ರೊ.ಮನೋಹರ್ ಕಾಮತ್ ಅವರಿಗೆ ಸರ್ಜೆಂಟ್ ಅಟ್ ಆರ್ಮ್ಸ್ ರೊ.ಮಲ್ಲಿಗೆ ಪೈ ಅವರು ಕಾಲರ್ ಅಲಂಕರಿಸುವ ಮೂಲಕ ಗೌರವ ಸಲ್ಲಿಸಿದರು. ಅಧ್ಯಕ್ಷರು ಸಭಿಕರನ್ನು ಸ್ವಾಗತಿಸಿ, ಸ್ವಾತಂತ್ರ‍್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕಾರ್ಯದರ್ಶಿ ರೊ.ಬಿ.ಎಂ.ಸೋಮಣ್ಣ ಅವರಿಂದ ಕ್ಲಬ್ ಅಭಿನಂದನಾ ಕಾರ್ಯಕ್ರಮ ನಡೆಯಿತು. ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಅವರನ್ನು ರೊ.ಪ್ರಿನ್ಸ್ ಪೊನ್ನಣ್ಣ ಪರಿಚಯಿಸಿದರು. ರೊ.ಡಾ.ಪಾಟ್ಕರ್ ಅವರು ಸಿ.ಎಂ.ತಿಮ್ಮಣ್ಣ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರೋಟರಿ ಸದಸ್ಯರ ಉಪಸ್ಥಿತಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜವಂದನೆ ಹಾಗೂ ರಾಷ್ಟ್ರಗೀತೆಯ ನಂತರ ರೋಟರಿ ಧ್ವಜಗೀತೆ ಹಾಡಲಾಯಿತು. ಕ್ಲಬ್ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊ0ಡಿತು. ಕಾರ್ಯದರ್ಶಿ ರೊ.ಬಿ.ಎಂ.ಸೋಮಣ್ಣ ವಂದಿಸಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಸರ್ವಿಸ್ ನಿರ್ದೇಶಕ ರೊ.ಅನಿಲ್ ಕೃಷ್ಣಾನಿ ಅವರ ನೇತೃತ್ವದಲ್ಲಿ ವಿಶೇಷ ಲೈವ್ ದೋಸೆ ಕೌಂಟರ್ ಗಮನ ಸೆಳೆಯಿತು.









