ಮಡಿಕೇರಿ, NEWS DESK ಆ.21 : ಕಣ್ಣಂಗಾಲ ಗ್ರಾಮ ಪಂಚಾಯತಿಗೆ ಒಳಪಡುವ ಯಡೂರು ವ್ಯಾಪ್ತಿಯಲ್ಲಿ ಕೃಷಿ ಫಸಲು ನಾಶ, ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಸುಮಾರು 38 ವರ್ಷದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಬುಧವಾರ ಕಾಡಾನೆಯೊಂದನ್ನು ಸೆರೆ ಹಿಡಿದು ಗುರುವಾರ ತಾತ್ಕಾಲಿಕ ಬಿಡುವು ನೀಡಿ ಶುಕ್ರವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ತಂಡ ಯಡೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಮತ್ತೊಂದು ಕಾಡಾನೆಯನ್ನು ಅರವಳಿಕೆ ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರದಿಂದ 3 ಆನೆಗಳನ್ನು ಹಿಡಿಯಲು ಆದೇಶ ನೀಡಲಾಗಿತ್ತು. ಇದೀಗ ಎರಡು ಆನೆಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿದು ದುಬಾರೆ ಶಿಬಿರಕ್ಕೆ ಸ್ಥಳಾಂತರ ಮಾಡಿರುವ ಅರಣ್ಯ ಇಲಾಖೆ ಶನಿವಾರ, ಭಾನುವಾರ ಮತ್ತೆ ಬಿಡುವು ನೀಡಿದ್ದು, ಉಪಟಳ ನೀಡುತ್ತಿರುವ ಮತ್ತೊಂದು ಆನೆಯನ್ನು ಪತ್ತೆ ಹಚ್ಚಿ ಸೋಮವಾರ ಮತ್ತೆ ಕಾರ್ಯಾಚರಣೆ ಮುಂದುವರೆಸಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ದುಬಾರೆ ಶಿಬಿರದ ಕ್ಯಾಪ್ಟನ್ ಸುಗ್ರೀವ ಒಳಗೊಂಡಂತೆ ಐದು ಸಾಕಣೆಗಳು ಭಾಗಿಯಾಗಿದ್ದವು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ, ಡಿಎಫ್ಒ ವಿನುತಾ ಚೌಹಾಣ್ ನೇತೃತ್ವದ ತಂಡದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಆನೆ ಸೆರೆ ವಿಷಯ ತಿಳಿದ ತಕ್ಷಣ ಕಣ್ಣಂಗಾಲ ಗ್ರಾಮದ ಸುತ್ತಮುತ್ತಲ ಜನರು ನಿಟ್ಟುಸಿರು ಬಿಟ್ಟಿದ್ದು, ಸೆರೆ ಸಿಕ್ಕ ಆನೆಯನ್ನು ವಿಶೇಷ ವಾಹನಕ್ಕೇರಿಸುವ ದೃಶ್ಯವನ್ನು ವೀಕ್ಷಿಸಲು ಕುತೂಹಲದಿಂದ ನೂರಾರು ಜನ ಆಗಮಿಸಿದ್ದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ರವರ ಮಾರ್ಗದರ್ಶನದಲ್ಲಿ ಡಿಎಫ್ಒ ವಿನುತಾ ಚೌಹಾಣ್, ಎಸಿಎಫ್ ತಹಸೀಲ್ ಬಾನು ರವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಶಿವರಾಂ, ಮನೋಜ್, ದೇವರಾಜ್, ಶಶಿ, ಪ್ರಶಾಂತ್, ಸುನಿಲ್ ರವರ ಮುಂದಾಳತ್ವದಲ್ಲಿ ನಡೆದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿವಿಧ ಕಡೆಯಿಂದ ಆಗಮಿಸಿದ್ದ ಆರ್ ಆರ್ ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

*****************************
ಕೃಷಿ ನಾಶ ಪಡಿಸಿ, ಮಾನವ ಪ್ರಾಣ ಹಾನಿಗೆ ಕಾರಣವಾಗಿರುವ 3 ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರದಿಂದ ಆದೇಶ ನೀಡಲಾಗಿದ್ದು, ಈಗಾಗಲೇ ಬುಧವಾರ 33 ವರ್ಷದ ಕಾಡಾನೆಯನ್ನು ಸೆರೆ ಹಿಡಿದು ದುಬಾರೆ ಶಿಬಿರಕ್ಕೆ ಸ್ಥಳಾಂತರ ಮಾಡಿದ್ದ ನಮ್ಮ ತಂಡ, ಶುಕ್ರವಾರ ಮತ್ತೆ ಕಾರ್ಯಾಚರಣೆ ನಡೆಸಿ 38 ವರ್ಷದ ಮತ್ತೊಂದು ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ. ಕಾರ್ಯಾಚರಣೆಯಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಶನಿವಾರ ಹಾಗೂ ಭಾನುವಾರ ಮತ್ತೆ ಬಿಡುವು ನೀಡಿದ್ದು, ಸೋಮವಾರ ಮತ್ತೆ ಕಾರ್ಯಾಚರಣೆ ಮುಂದುವರೆಸಿ ಮತ್ತೊಂದು ಕಾಡಾನೆಯನ್ನು ಸೆರೆಹಿಡಿಯಲಿದ್ದೇವೆ.
ವಿನುತ ಚೌಹಾಣ್, ಡಿಎಫ್ಒ ವಿರಾಜಪೇಟೆ ಅರಣ್ಯ ವಲಯ







