ಮಡಿಕೇರಿ, NEWS DESK ಆ.25 : ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಮಡಿಕೇರಿ ಆದಾಯ ತೆರಿಗೆ ಇಲಾಖೆ ಸಹಯೋಗದಲ್ಲಿ “ಆದಾಯ ತೆರಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು” ವಿಷಯದ ಕುರಿತು ಕಾರ್ಯಾಗಾರವನ್ನು ಮಂಗಳವಾರ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ರಾಘವ ಬಿ. ವಹಿಸಿದ್ದರು. ಆದಾಯ ತೆರಿಗೆ ಇಲಾಖೆಯ ಮಡಿಕೇರಿ ಕಚೇರಿಯ ಆದಾಯ ತೆರಿಗೆ ಅಧಿಕಾರಿ ಶ್ರೀ ಮಂಜುನಾಥ ಮೃತ್ತ್ಯುಂಜಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಆರ್. ಭಂಡಾರಿ ಅವರು ಗಣ್ಯರು, ಸಂಪನ್ಮೂಲ ವ್ಯಕ್ತಿ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಮೇಜರ್ ಡಾ. ರಾಘವ ಬಿ. ಅವರು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಆದಾಯ ತೆರಿಗೆಯ ಮಹತ್ವವನ್ನು ವಿವರಿಸಿದರು. ವಾಣಿಜ್ಯ ವಿದ್ಯಾರ್ಥಿಗಳಿಗೆ ತೆರಿಗೆ ಕುರಿತ ಜ್ಞಾನ ಅತ್ಯಂತ ಅಗತ್ಯವಾಗಿದ್ದು, ಲೆಕ್ಕಪತ್ರ, ಹಣಕಾಸು, ಬ್ಯಾಂಕಿಂಗ್, ವ್ಯವಹಾರ ಹಾಗೂ ಸರ್ಕಾರಿ ಸೇವೆಗಳಲ್ಲಿ ಇದು ಉಪಯುಕ್ತವಾಗಿದೆ ಎಂದರು. ಪ್ರತಿಯೊಬ್ಬ ನಾಗರಿಕನು ತನ್ನ ತೆರಿಗೆ ಜವಾಬ್ದಾರಿಗಳನ್ನು ಅರಿತುಕೊಂಡು ತೆರಿಗೆ ವ್ಯವಸ್ಥೆಯ ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವವನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ಶಿಸ್ತು, ನಿರಂತರ ಅಧ್ಯಯನ, ಸಂವಹನ ಕೌಶಲ್ಯ ಹಾಗೂ ವಿಶ್ಲೇಷಣಾತ್ಮಕ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಶ್ರೀ ಮಂಜುನಾಥ ಮೃತ್ತ್ಯುಂಜಯ ಅವರು ಆದಾಯ ತೆರಿಗೆಯ ವಿವಿಧ ಆಯಾಮಗಳು, ಅದರ ಪ್ರಾಯೋಗಿಕ ಮಹತ್ವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ದೊರೆಯಬಹುದಾದ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರ ಸಂವಾದವು ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಪ್ರಾಯೋಗಿಕ ತಿಳುವಳಿಕೆ ಮೂಡಿಸಲು ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಶೈಲಶ್ರೀ ಕೆ. ಸೇರಿದಂತೆ ವಿಭಾಗದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲರ ಸಹಕಾರದಿಂದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಆದಾಯ ತೆರಿಗೆ, ವೃತ್ತಿಪರ ಜವಾಬ್ದಾರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ಮೂಲಕ ಜ್ಞಾನವರ್ಧಕ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.







