ಮಡಿಕೇರಿ NEWS DESK ಆ.25 : ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ನದಿ, ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಭಾಗಮಂಡಲ, ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ರಾತ್ರಿಯಿಂದ ಬೆಳಗ್ಗಿನ ಅವಧಿಯವರೆಗೆ 110 ಮಿ.ಮೀ.ಗೂ ಹೆಚ್ಚಿನ ಮಳೆಯಾಗಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿ ಪ್ರವಾಹ ರಸ್ತೆಗಳನ್ನು ಆವರಿಸಿದೆ. ಕಾವೇರಿ ನದಿ ಪಾತ್ರದ ಪ್ರದೇಶಗಳಾದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗದಲ್ಲು ಭಾರೀ ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆ 10 ಗಂಟೆಯವರೆಗೆ ಗುಡುಗು, ಸಿಡಿಲು ಸಹಿತ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಮೈಕೊರೆಯುವ ಚಳಿ ಇದೆ. ಗಾಳಿ ಮಳೆಯ ಪರಿಣಾಮ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯಿಂದ ಸುದರ್ಶನ ಅತಿಥಿ ಗೃಹಕ್ಕೆ ತೆರಳುವ ಹಾದಿಯ ಪಕ್ಕದ ಬರೆ ಕುಸಿತವಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಗರದ ವಿವಿಧೆೆಡೆ ಮಳೆಯಿಂದ ಹಾನಿಗೊಳಗಾದ ವಾರ್ಡ್ಗಳಿಗೆ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅರುಣ್ ಶೆಟ್ಟಿ, ಎಸ್.ಸಿ.ಸತೀಶ್, ಅಪ್ಪಣ್ಣ ಹಾಗೂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಪಂ ವ್ಯಾಪ್ತಿಯ ನೆಲಜಿ ಗ್ರಾಮದ ಪಳಂಗಪ್ಪ ಎಂಬುವವರ ವಾಸದ ಮನೆಯ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ದಕ್ಷಿಣ ಕೊಡಗಿನ ವಿರಾಜಪೇಟೆ, ಅಮ್ಮತ್ತಿ, ಹುದಿಕೇರಿ, ಶ್ರೀಮಂಗಲ, ಉತ್ತರ ಕೊಡಗಿನ ಶಾಂತಳ್ಳಿ, ಸೋಮವಾರಪೇಟೆ, ಕುಶಾಲನಗರ ವಿಭಾಗದಲ್ಲೂ ಉತ್ತಮ ಮಳೆÉಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 1348.74 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2428.29 ಮಿ.ಮೀ ಮಳೆಯಾಗಿತ್ತು.
*ಹಾರಂಗಿ ಜಲಾಶಯದ ನೀರಿನ ಮಟ್ಟ*
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.45 ಅಡಿಗಳು. ಕಳೆದ ವರ್ಷ ಇದೇ ದಿನ 2857.80 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 17.80 ಮಿ.ಮೀ., ಇಂದಿನ ನೀರಿನ ಒಳಹರಿವು 3638 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2533 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 4375 ಕ್ಯುಸೆಕ್. ನಾಲೆಗೆ 600 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1500 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್.








