
ಮಡಿಕೇರಿ NEWS DESK ಆ.26 : ಗೌರಿ-ಗಣೇಶೋತ್ಸವ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಸರಕಾರ ವಿಶೇಷ ಅನುಮತಿ ನೀಡಬೇಕೆಂದು ಕೊಡಗು ಯುವ ಸೇನಾ ಮುಖಂಡ ಕುಲದೀಪ್ ಪೂನಾಚ ಒತ್ತಾಯಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ-ಗಣೇಶೋತ್ಸವ ಹಾಗೂ ದಸರಾ ಹಬ್ಬಗಳು ಸಮೀಪಿಸುತ್ತಿದ್ದು, ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸಮಿತಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ವಿರಾಜಪೇಟೆಯಲ್ಲಿ ಗಣೇಶೋತ್ಸವ, ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಸರಾ ಜನೋತ್ಸವಗಳು ಅದ್ದೂರಿಯಾಗಿ ನಡೆಯಲಿದ್ದು, ರಾತ್ರಿ ವೇಳೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿದರೆ ಹಬ್ಬದ ಸಂಭ್ರಮಕ್ಕೆ ಧಕ್ಕೆಯಾಗುವುದಲ್ಲದೆ, ಯುವ ಸಮುದಾಯದ ಪಾಲ್ಗೊಳ್ಳುವಿಕೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು, ಹಬ್ಬಗಳ ಸಂದರ್ಭದಲ್ಲಿ ನಿಯಮಾನುಸಾರ ಧ್ವನಿವರ್ಧಕ ಬಳಕೆಗೆ ವಿಶೇಷ ಅನುಮತಿ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕುಲದೀಪ್ ಪೂನಾಚ ಮನವಿ ಮಾಡಿದ್ದಾರೆ. ಹಬ್ಬದ ಸಂಭ್ರಮ ಮತ್ತು ಸಾಂಸ್ಕೃತಿಕ ವಾತಾವರಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಧ್ವನಿವರ್ಧಕ ಬಳಕೆಗೆ ಸೂಕ್ತ ಸಮಯ ಹಾಗೂ ನಿಯಮಗಳನ್ನು ನಿಗದಿಪಡಿಸಿ ವಿಶೇಷ ಅವಕಾಶ ನೀಡುವ ಮೂಲಕ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಲು ಸರಕಾರ ಮುಂದಾಗಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.









