
ಸುಂಟಿಕೊಪ್ಪಆ.25 NEWS DESK : ಭತ್ತದ ಕೃಷಿ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಬಾಲ್ಯದಲ್ಲಿಯೇ ಮಕ್ಕಳಿಗೆ ನಾಟಿ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಆನೆಕಾಡು ಅರಣ್ಯ ವಲಯ ಅಧಿಕಾರಿ ಮಧುಕುಮಾರ್ ಹೇಳಿದರು. ಗದ್ದೆಹಳ್ಳದ ಹೋಮ್ಸ್ ಸಂಸ್ಥೆಯ ವತಿಯಿಂದ ಕೃತಿಕಾ ಹಾಗೂ ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ‘ಜಿಜಿಎ ನಾಟಿ ಉತ್ಸವ–2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷಿಗಳು ತಮ್ಮ ಬಳಗಕ್ಕೆ ಆಹಾರ ಸಂಗ್ರಹಿಸಿ ಪೋಷಣೆ ಮಾಡುವ ರೀತಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ರೈತರೂ ಭತ್ತದ ಕೃಷಿಯ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ಮಡಿಕೇರಿ ಕೃಷಿ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕಿ ಡಾ. ಹೆಚ್.ಸಿ. ಲತಾ ಮಾತನಾಡಿ, ಭತ್ತದ ಕೃಷಿ, ಅದರ ಬೆಳವಣಿಗೆ ಹಾಗೂ ಕೃಷಿಯ ಪರಿಕಲ್ಪನೆಯ ಕುರಿತು ರೈತರು ಮತ್ತು ಮಕ್ಕಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನಾಟಿ ಉತ್ಸವ–2026ಕ್ಕೆ ಉದ್ಯಮಿ ಹಾಗೂ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಸ್.ಜಿ. ಶ್ರೀನಿವಾಸ್ ಚಾಲನೆ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಎಲ್. ಕುಶಾಲಿ, ಶಿಕ್ಷಕಿ ಶಾಂತಿ ದೇವರಾಜ್, ಅರ್ಪಿತಾ ಧರ್ಮಪ್ಪ, ಪ್ರೇಮಾ ಗಣೇಶ್ ಕಟ್ಟೆಮನೆ ಹಾಗೂ ಭತ್ತದ ನಾಟಿ ಪ್ರವೀಣೆ ಕಮಲ ಅವರನ್ನು ‘ಜಿಜಿಎ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಸನ್ನ ಎಡಕೇರಿ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ವಿಶೇಷ ಶಿಕ್ಷಕಿ ಅನ್ನಮ್ ಜೀರಾ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪಿ.ಪಿ. ಜಯನಂದ, ಒಳಾಂಗಣ ವಿನ್ಯಾಸಕಿ ಕೃತಿಕಾ ಸದಾನಂದ್, ಓಎಪಿಪಿಎ ಸಂಸ್ಥೆಯ ಮಾಲೀಕರಾದ ಗಂಗೂಬಾಯಿ, ಹೋಮ್ಸ್ ಸಂಸ್ಥೆಯ ಸಂಘಟಕರಾದ ಸನ್ಮಾನ್, ತೃಶಾಲ್ ಸನ್ಮಾನ್, ಗಾನ ಪಾರ್ಥ, ನಿಡುಮಲೆ ಮಾಧವ, ಆಯೋಜಕರಾದ ಪಾರ್ಥ ಭೀಮಯ್ಯ, ಪವಿತ್ರ ಶೆಟ್ಟಿ, ಪ್ರದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಟಿ ಉತ್ಸವದಲ್ಲಿ ವಿವಿಧ ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು, ನುರಿತ ನಾಟಿ ಕಾರ್ಮಿಕರೊಂದಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ನಾಟಿ ಕೃಷಿಯ ಅನುಭವ ಪಡೆದರು. ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.









