
ಮಡಿಕೇರಿ, NEWS DESK ಆ.30: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಕಾರ್ಯಕಾರಿ ಮಂಡಳಿ ಸಭೆಯು ಮಡಿಕೇರಿಯ ಕೊಡಗು ಪತ್ರಿಕಾ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಿದ್ದರು. ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಳೆದ ಸಾಲಿನಲ್ಲಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಮತ್ತು ಸದಸ್ಯರ ಸಭೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕಾರಿ ಸಮಿತಿಯ 6 ಸಭೆಗಳು, ಪದಾಧಿಕಾರಿಗಳ 12 ಸಭೆಗಳು, ಜಿಲ್ಲಾ ಸಮ್ಮೇಳನ ಹಾಗೂ ಮೂರು ತಾಲೂಕು ಸಮ್ಮೇಳನಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಇದರೊಂದಿಗೆ ಸಂಸ್ಥಾಪನಾ ದಿನಾಚರಣೆ, ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದಿನಾಚರಣೆ, ಸರ್ ಎಂ. ವಿಶ್ವೇಶ್ವರಯ್ಯ ದಿನಾಚರಣೆ ಹಾಗೂ ಮಿರ್ಜಾ ಇಸ್ಮಾಯಿಲ್ ದಿನಾಚರಣೆಗಳನ್ನು ಆಚರಿಸಲಾಗಿದ್ದು, 37 ದತ್ತಿನಿಧಿ ಕಾರ್ಯಕ್ರಮಗಳು ಮತ್ತು 15 ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. 2026-27ನೇ ಸಾಲಿನಲ್ಲಿ ಒಟ್ಟು 38 ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳನ್ನು ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ತಾಲೂಕು ಮತ್ತು ಹೋಬಳಿ ಸಮಿತಿಗಳಿಗೆ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸೂಚಿಸಿದರು.
ಸಭೆಯಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯ ಕೊನೆಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಡಿಕೇರಿ ಘಟಕದ ಬ್ರಹ್ಮಕುಮಾರಿ ಧನಲಕ್ಷ್ಮಿ ಮತ್ತು ಬ್ರಹ್ಮಕುಮಾರಿ ರಮಾ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರಕ್ಷಾಬಂಧನ ಕಟ್ಟಿ, ರಕ್ಷಾಬಂಧನದ ಮಹತ್ವ ಹಾಗೂ ಸಂದೇಶವನ್ನು ನೀಡಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಸಹಕಾರ್ಯದರ್ಶಿ ಎ.ವಿ. ಮಂಜುನಾಥ್, ಜಿಲ್ಲಾ ನಿರ್ದೇಶಕ ಹೆಚ್.ಎಸ್. ಪ್ರೇಮ್ ಕುಮಾರ್, ಐಗೂರು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಎ.ಪಿ. ವೀರರಾಜ್ ಹಾಗೂ ಕುಶಾಲನಗರ ತಾಲೂಕು ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್ ಉಪಸ್ಥಿತರಿದ್ದರು.









