ವಿರಾಜಪೇಟೆ, NEWS DESK ಆ.30: ಅಮ್ಮತಿಯ ಗುಡ್ ಶೆಫರ್ಡ್ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
400 ಮೀಟರ್ ಓಟದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಕರ್ನಂದ ಕೃತಿಕಾ ಅಕ್ಕಮ್ಮ ಪ್ರಥಮ ಹಾಗೂ 9ನೇ ತರಗತಿಯ ಕರ್ನಂದ ಶತಕ ಕಾವೇರಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. 200 ಮೀಟರ್ ಓಟದಲ್ಲಿ 10ನೇ ತರಗತಿಯ ಬೋವ್ವೆರಿಯಂಡ ಹನ್ಸಿಕ ಪೊನ್ನಪ್ಪ ಪ್ರಥಮ ಸ್ಥಾನ ಗಳಿಸಿದ್ದಾರೆ.
800 ಮೀಟರ್ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಚಬಂಡ ವಿಬಿನ್ ದ್ವಿತೀಯ ಹಾಗೂ 400 ಮೀಟರ್ ಓಟದಲ್ಲಿ 9ನೇ ತರಗತಿಯ ಕುಟ್ಟಂಡ ಚಿರಾಗ್ ಎಲ್. ದ್ವಿತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ 10ನೇ ತರಗತಿಯ ಗುಡ್ದಂಡ ಮುತ್ತಮ್ಮ ಟಿ. ತೃತೀಯ ಸ್ಥಾನ ಗಳಿಸಿದ್ದಾರೆ.
4×100 ಮೀಟರ್ ರಿಲೇ ಬಾಲಕಿಯರ ವಿಭಾಗದಲ್ಲಿ ಹನ್ಸಿಕ ಪೊನ್ನಪ್ಪ, ಕುಲ್ಲಚಂಡ ಭೂಮಿಕ ಭೋಜಮ್ಮ, ಕರ್ನಂದ ಶತಕ ಕಾವೇರಮ್ಮ ಹಾಗೂ ಕರ್ನಂದ ಕೃತಿಕಾ ಅಕ್ಕಮ್ಮ ಅವರ ತಂಡ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದೆ. 4×400 ಮೀಟರ್ ರಿಲೇಯಲ್ಲಿ ಬೋವ್ವೆರಿಯಂಡ ಹನ್ಸಿಕ ಪೊನ್ನಪ್ಪ, ಫಿದಾ ಫಾತಿಮಾ, ಕರ್ನಂದ ಶತಕ ಕಾವೇರಮ್ಮ ಹಾಗೂ ಕರ್ನಂದ ಕೃತಿಕಾ ಅಕ್ಕಮ್ಮ ಅವರ ತಂಡ ದ್ವಿತೀಯ ಸ್ಥಾನ ಪಡೆದಿದೆ.
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕಿಯರಾದ ಮೋನಿಕಾ ಹಾಗೂ ಲಾವಣ್ಯ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುಧೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಪಂದ್ಯಾವಳಿಗಳಿಗೆ ಶುಭ ಹಾರೈಸಿದ್ದಾರೆ.








