ಮಡಿಕೇರಿ, NEWS DESK ಸೆ.01: ಕ್ಷುಲ್ಲಕ ಜಗಳವಾಡಿದ ತಾಯಿ ಹಾಗೂ ಮಗಳು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕೆಂಪುರಾಶಿ ಮೊಟ್ಟೆಯಲ್ಲಿ ನಡೆದಿದೆ.
ಮಂಜು ಎಂಬುವವರ ಪತ್ನಿ ಪ್ರೇಮ (36) ಹಾಗೂ ಮಗಳು ಪ್ರಿಯಾಂಕಾ (14) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮನೆಯಲ್ಲಿ ತಾಯಿ ಹಾಗೂ ಮಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಆ.31ರ ಸಂಜೆ ಜಗಳ ನಡೆದಿದೆ ಎನ್ನಲಾಗಿದೆ.
ಮಗಳು ಪ್ರಿಯಾಂಕಾ ತಾನು ಕೆರೆಗೆ ಹಾರುವುದಾಗಿ ಹೇಳಿ ಮನೆಯಿಂದ ಓಡಿ ಹೋಗಿದ್ದಾಳೆ. ಮಗಳು ಕೆರೆಯತ್ತ ಹೋಗುವುದನ್ನು ಕಂಡ ತಾಯಿ ಪ್ರೇಮ ಕೂಡ ಆತಂಕಗೊಂಡು ಆಕೆಯ ಹಿಂದೆ ಓಡಿದ್ದಾರೆ. ಈ ವೇಳೆ ಪ್ರಿಯಾಂಕಾ ಕೆರೆಗೆ ಹಾರಿದ್ದು, ಮಗಳನ್ನು ರಕ್ಷಿಸುವ ಉದ್ದೇಶದಿಂದ ತಾಯಿ ಪ್ರೇಮ ಕೂಡ ಕೆರೆಗೆ ಹಾರಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯನ್ನು ದೂರದಿಂದ ಕಂಡ ಸ್ಥಳೀಯರು ಇಬ್ಬರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಪೊಲೀಸರು ಭೇಟಿ ನೀಡಿ, ಮಂಗಳವಾರ ಬೆಳಗ್ಗೆ ತಾಯಿ ಪ್ರೇಮ ಹಾಗೂ ಪುತ್ರಿ ಪ್ರಿಯಾಂಕಾ ಅವರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಘಟನೆಗೆ ಸಂಬಂಧಿಸಿದಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







