ಸುಂಟಿಕೊಪ್ಪ, NEWS DESK ಸೆ.2: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ವನಮಹೋತ್ಸವ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಗುಡ್ಡೆಹೊಸೂರಿನ ಖಾಸಗಿ ರೇಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಎಸ್.ಜಿ. ಶ್ರೀನಿವಾಸ್ ಅವರು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ರೈತರಿಗೆ 200ಕ್ಕೂ ಮಿಕ್ಕಿ ಗಿಡಗಳನ್ನು ವಿತರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ 60 ವರ್ಷ ಪೂರೈಸಿದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ, ಅವರ ಸಾಧನೆಯನ್ನು ಪ್ರಸ್ತುತಪಡಿಸಲಾಯಿತು. ಸದಸ್ಯರಿಗೆ ವಿವಿಧ ರೀತಿಯ ಆಟೋಟಗಳನ್ನು ಸಹ ಏರ್ಪಡಿಸಲಾಗಿತ್ತು.
ಹಿರಿಯ ಸದಸ್ಯರಾದ ಕೋಟೇರ ಶಂಭುಚಂಗಪ್ಪ ಹಾಗೂ ರಮ್ಯ ಅವರ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ಎಸ್.ಜಿ. ಶ್ರೀನಿವಾಸ್ ವಹಿಸಿ, 50ನೇ ವರ್ಷದಲ್ಲಿರುವ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಲಯನ್ಸ್ ಕಾರ್ಯದರ್ಶಿ ಗ್ಲೇನ್ ಮೇನೇಜೆಸ್, ಹಿರಿಯ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಡಿ. ರಾಮಯ್ಯ, ಕೆ.ಸಿ. ವಿಶ್ವನಾಥ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.







