
ಮಡಿಕೇರಿ, ಸೆ.2 NEWS DESK : ಸಂಸ್ಕೃತಿಯೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಮನುಷ್ಯತ್ವ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 19ನೇ ‘ಕೊಡವ ಪುಸ್ತಕ ಪತ್ತಾಯ’ವನ್ನು ಕೈಕೇರಿಯ ಸವಿತಾ ಸಮಾಜ ಕಟ್ಟಡದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ವಿದ್ಯೆ ಮತ್ತು ಬುದ್ಧಿಯೊಂದಿಗೆ ಉತ್ತಮ ನಡೆ-ನುಡಿ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಜಾತಿ ವ್ಯವಸ್ಥೆಯಿಂದ ದೂರ ಸರಿಯಲು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಯಾದ ‘ಕೊಡವ ಪುಸ್ತಕ ಪತ್ತಾಯ’ವನ್ನು ನಾಡಿನಾದ್ಯಂತ ಸಂಘ-ಸಂಸ್ಥೆಗಳು, ಸಮಾಜಗಳು, ದೇವನೆಲೆಗಳು ಹಾಗೂ ಐನ್‌ಮನೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಈ ಯೋಜನೆಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಘ-ಸಂಸ್ಥೆಗಳು, ಸಮಾಜಗಳು ಹಾಗೂ ಐನ್‌ಮನೆಗಳಿಗೆ ಅಕಾಡೆಮಿ ವತಿಯಿಂದ ನೀಡಲಾಗುತ್ತಿರುವ ದುಡಿ, ತಾಳ ಸೇರಿದಂತೆ ವಿವಿಧ ಪರಿಕರಗಳನ್ನು ಕೊಡವ ಸಂಸ್ಕೃತಿಯ ಉನ್ನತಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದರು. ಆಯಾ ಪ್ರದೇಶಗಳಲ್ಲಿ ಬಾಳೋಪಾಟ್, ಉಮ್ಮತ್ತಾಟ್ ಹಾಗೂ ಕೋಲಾಟ್ ಕಲೆಯಲ್ಲಿ ಪರಿಣತಿ ಹೊಂದಿರುವವರು ಯುವ ಪೀಳಿಗೆಗೆ ‘ಆಟ್-ಪಾಟ್’ ಕಲಿಸಿಕೊಡಲು ಮುಂದಾದರೆ ಅಕಾಡೆಮಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಸವಿತಾ ಸಮಾಜದ ಅಧ್ಯಕ್ಷ ನಾಯಂದಿರ ಆರ್. ಶಿವಾಜಿ ಮಾತನಾಡಿ, ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಕಲಿತ ಜ್ಞಾನ ಶಾಶ್ವತವಾಗಿ ಉಳಿಯುತ್ತದೆ. ಅಕಾಡೆಮಿ ವತಿಯಿಂದ ಸವಿತಾ ಸಮಾಜದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಲ್ಲದೆ, ಅಕಾಡೆಮಿ ವತಿಯಿಂದ ಸಮಾಜಕ್ಕೆ ಒಡಿಕತ್ತಿ ಹಾಗೂ ದುಡಿ-ತಾಳ ನೀಡಿರುವುದು ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಸವಿತಾ ಸಮಾಜಕ್ಕೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಸವಿತಾ ಸಮಾಜದ ವತಿಯಿಂದ ಅಕಾಡೆಮಿ ಅಧ್ಯಕ್ಷರಿಗೆ ರೂ.10 ಸಾವಿರ ಮೊತ್ತದ ಚೆಕ್ ನೀಡಲಾಯಿತು.
ವೇದಪಂಡ, ಚೋಂದುವಂಡ ಹಾಗೂ ಮುಡುವಂಡ ಕುಟುಂಬಸ್ಥರಿಗೆ ದುಡಿ ವಿತರಿಸಲಾಯಿತು. ಸಮಾಜಕ್ಕೆ ಒಡಿಕತ್ತಿಯನ್ನೂ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವೇದಪಂಡ ವಿನುತ ಲವ ಪ್ರಾರ್ಥಿಸಿದರು. ತಾಪನೆರ ಸುಷ್ಮಿ ವಿಠಲ ಸ್ವಾಗತಿಸಿ, ನಿರೂಪಿಸಿದರು. ಸಮಾಜದ ಉಪಾಧ್ಯಕ್ಷ ಮುಡುವಂಡ ಎಸ್. ರಮೇಶ್, ನಿರ್ದೇಶಕ ಹಾಗೂ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಾಪನೆರ ಎಂ. ಸುರೇಶ್, ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.









