
ವಿರಾಜಪೇಟೆ ಸೆ.2 NEWS DESK : ಅಮ್ಮತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. 400 ಮೀಟರ್ ಬಾಲಕರ ಓಟದ ಸ್ಪರ್ಧೆಯಲ್ಲಿ ಹಿತಾರ್ಥ್ ಪಿ.ಜಿ. ದ್ವಿತೀಯ ಸ್ಥಾನ ಹಾಗೂ ಐಚಂಡ ಯು. ತಲಿಶ್ ತಿಮ್ಮಣ್ಣ ತೃತೀಯ ಸ್ಥಾನ ಪಡೆದಿದ್ದಾರೆ. 600 ಮೀಟರ್ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಅಮ್ಮಂಡ ಗಿಯಾನ ಎ. ತೃತೀಯ ಸ್ಥಾನ ಗಳಿಸಿದ್ದಾರೆ. 4×100 ಮೀಟರ್ ರಿಲೇ ಬಾಲಕಿಯರ ವಿಭಾಗದಲ್ಲಿ ನಡುಮನೆ ಮೋಕ್ಷಿತ ಎನ್.ಎಸ್., ಅಮ್ಮಂಡ ಗಿಯಾನ ಎ., ಮಾಲೆಟ್ಟಿರ ಚಾಲ್ಸಿ ಜಿ. ಹಾಗೂ ಪಾಲೇಯಂಡ ಶಾನ್ವಿ ಪೊನ್ನಮ್ಮ ಎಸ್. ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇದೇ ರೀತಿ 4×100 ಮೀಟರ್ ರಿಲೇ ಬಾಲಕರ ವಿಭಾಗದಲ್ಲಿ ಕರ್ನಂದ ಸನತ್ ಮುತ್ತಣ್ಣ, ಹಿತಾರ್ಥ್ ಪಿ.ಜಿ., ಬಾರಿಕ್ ಯಶ್ವಿನ್ ಸುಬ್ಬಯ್ಯ ಎಲ್. ಹಾಗೂ ಅಮ್ಮಂಡ ತನಿಶ್ ನಾಣಯ್ಯ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಮೋನಿಕಾ ಹಾಗೂ ಲಾವಣ್ಯ ಅವರು ತರಬೇತಿ ನೀಡಿ ಮಾರ್ಗದರ್ಶನ ಮಾಡಿದ್ದರು. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುಧೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ಪಂದ್ಯಾವಳಿಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.










