
ಸೋಮವಾರಪೇಟೆ NEWS DESK ಸೆ.4 : ಈ ವರ್ಷ ಮಳೆಯ ಪ್ರಮಾಣದಲ್ಲಿ ಏರುಪೇರಾಗಿರುವ ಪರಿಣಾಮ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ ಕಾಯಿಗಳಲ್ಲಿ ಕಪ್ಪು ಕೊಳೆ (ಬ್ಲ್ಯಾಕ್ ರಾಟ್) ರೋಗ ಕಾಣಿಸಿಕೊಂಡು ಉದುರುವಿಕೆ ಹೆಚ್ಚಾಗಿದೆ. ಕೂಡಲೇ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಸರ್ಕಾರವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಕಾಫಿ ಗಿಡಗಳಲ್ಲಿ ಹೂ ಅರಳುವಿಕೆ ವಿಳಂಬವಾಗಿದೆ. ಬಳಿಕ ಆಗಾಗ್ಗೆ ಸಣ್ಣ ಪ್ರಮಾಣದ ಮಳೆಯಾದ ಕಾರಣ ಹಲವು ಹಂತಗಳಲ್ಲಿ ಕಾಫಿ ಗಿಡಗಳು ಹೂ ಬಿಟ್ಟಿವೆ. ಇದರಿಂದ ಕಾಫಿ ಕಾಯಿಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ತಿಳಿಸಿದ್ದಾರೆ. ಜುಲೈ ತಿಂಗಳ ಕೊನೆಯ ವಾರದಿಂದ ಆರಂಭವಾದ ಹೆಚ್ಚಿನ ಮಳೆಯ ಪರಿಣಾಮ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ, ಕಾಫಿ ಕಾಯಿಗಳಲ್ಲಿ ಬ್ಲ್ಯಾಕ್ ರಾಟ್ ರೋಗ ಕಾಣಿಸಿಕೊಂಡಿದೆ. ಇದರಿಂದ ಕಾಯಿಗಳು ಉದುರುತ್ತಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಾಫಿ ಗಿಡಗಳಿಗೆ ಅಗತ್ಯವಿರುವ ಔಷಧೋಪಚಾರದ ಬಗ್ಗೆ ತೋಟಗಾರಿಕಾ ಹಾಗೂ ಕಾಫಿ ಮಂಡಳಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಂಘ ಮನವಿ ಮಾಡಿದೆ. ಮಳೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮೋಡ ಬಿತ್ತನೆ ಕೊಡಗಿಗೆ ಅವಶ್ಯಕತೆ ಇಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ನೆರವು ನೀಡಬೇಕು ಎಂದು ಸಂಘ ಆಗ್ರಹಿಸಿದೆ. ಇದಲ್ಲದೆ, ಕಸ್ತೂರಿರಂಗನ್ ವರದಿ ಜಾರಿ ಹಾಗೂ ಪರಿಸರ ಸೂಕ್ಷ್ಮ ವಲಯ ವಿಸ್ತರಣೆಯಿಂದ ಕಾಫಿ ಬೆಳೆಗಾರರು ಸೇರಿದಂತೆ ರೈತರ ಬದುಕು ಅತಂತ್ರವಾಗಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ಅವೈಜ್ಞಾನಿಕವಾಗಿ ಇಎಸ್‌ಜೆಡ್ ವ್ಯಾಪ್ತಿಯನ್ನು ವಿಸ್ತರಿಸುವ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿರುವ ಸಂಘ, ಕಸ್ತೂರಿರಂಗನ್ ವರದಿಯಿಂದ ಕೊಡಗಿನ ಗ್ರಾಮಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದನ್ನು ಸಂಘ ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ.









