ಸುಂಟಿಕೊಪ್ಪ, NEWS DESK ಸೆ. 4: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 7ನೇ ಹೊಸಕೋಟೆ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 7ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 3ನೇ ವರ್ಷದ ಶ್ರೀಕೃಷ್ಣ ಮತ್ತು ರಾಧಾ ಛದ್ಮವೇಷ ಸ್ಪರ್ಧೆಯನ್ನು ಶುಕ್ರವಾರ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಗಣಪತಿ ಮತ್ತು ಗೋಪಾಲಕೃಷ್ಣ ದೇವರಿಗೆ ಹೋಮ ಸಹಿತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಾಲಯದ ಪ್ರಧಾನ ಅರ್ಚಕರಾದ ನರಸಿಂಹ ಉಪಾಧ್ಯಾಯ ಅವರೊಂದಿಗೆ ಪ್ರಸನ್ನ ಭಟ್ ಹಾಗೂ ಸಂತೋಷ್ ಹೆಬ್ಬಾರ್ ಅವರು ವಿಶೇಷ ಪೂಜೆ, ಬೆಣ್ಣೆ ಅಲಂಕಾರ, ಗಣಪತಿ ಹೋಮ, ಶ್ರೀಕೃಷ್ಣ ಮಂತ್ರ ಹೋಮ ನೆರವೇರಿಸಿದರು. ಬಳಿಕ ಹಾಲಿನ ಅಭಿಷೇಕ ಹಾಗೂ ಹೂವಿನ ಅಲಂಕಾರದೊಂದಿಗೆ ಮಹಾಪೂಜೆ ನೆರವೇರಿಸಲಾಯಿತು.
ಕೃಷ್ಣಾಷ್ಟಮಿ ಅಂಗವಾಗಿ 5 ವರ್ಷದೊಳಗಿನ ಹಾಗೂ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧಾ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 5 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನಿಧಿ ಸಂದೀಪ್, ಈತಿಕ್ಷ ಹಾಗೂ ಜ್ಞಾನವಿಕ ಪಟೇಲ್ ಅವರು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.
5 ವರ್ಷ ಮೇಲ್ಪಟ್ಟ ಮಕ್ಕಳ ವಿಭಾಗದಲ್ಲಿ ಪ್ರತಿಕ್ಷ ಪೂಜಾರಿ, ಆರಾಧ್ಯ ಹಾಗೂ ದೀಕ್ಷಾ ಅವರು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.
ಸ್ಪರ್ಧೆಯ ತೀರ್ಪುಗಾರರಾಗಿ ಕವಿತಾ ಪ್ರಭಾಕರ್, ರಾಮಚಂದ್ರ ಹಾಗೂ ಬಿ.ಸಿ. ದಿನೇಶ್ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ಎರಡು ವಿಭಾಗಗಳಿಂದ ಒಟ್ಟು 46 ಮಂದಿ ಮಕ್ಕಳು ಪಾಲ್ಗೊಂಡಿದ್ದು, ಎಲ್ಲ ಸ್ಪರ್ಧಿಗಳಿಗೂ ಪ್ರೋತ್ಸಾಹದಾಯಕ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ಮತ್ತು ಗೋಪಾಲಕೃಷ್ಣ ದೇವಸ್ಥಾನದ ಸಮಿತಿ ಅಧ್ಯಕ್ಷ ದಾಸಂಡ ರಮೇಶ್, ಕಾರ್ಯದರ್ಶಿ ಶಿವಪ್ಪ, ಕಾರ್ಯಕ್ರಮದ ಆಯೋಜಕರಾದ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ, ರಾಮಚಂದ್ರ, ಪ್ರಕಾಶ್, ಚೇತನ್, ಸತೀಶ್, ಸಿಜು, ರವಿ, ಚಂದ್ರ ಸೇರಿದಂತೆ ಭಕ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







