ಮಡಿಕೇರಿ, NEWS DESK ಸೆ. 4: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಒಂಟಿ ಅಂಗಡಿ ಚಾಮುಂಡಿ ಪೈಸಾರಿ ಬಳಿ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಗಾಯಾಳುವನ್ನು ಅಭಿ (35) ಎಂದು ಗುರುತಿಸಲಾಗಿದ್ದು, ಮೂಲತಃ ನಾಪೋಕ್ಲು ಸಮೀಪದ ಗ್ರಾಮದವರಾಗಿದ್ದಾರೆ. ತಮ್ಮ ಅಣ್ಣನನ್ನು ನೋಡಲು ಒಂಟಿ ಅಂಗಡಿ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ಕಾಫಿ ತೋಟದ ಮಾರ್ಗವಾಗಿ ಬಂದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ.
ಆನೆ ದಾಳಿಯ ಪರಿಣಾಮ ಅಭಿ ಅವರ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ. ಇದೇ ವೇಳೆ ರಸ್ತೆಯ ಮಾರ್ಗವಾಗಿ ಬರುತ್ತಿದ್ದ ಆಟೋದಲ್ಲಿದ್ದವರು ಘಟನೆಯನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಾಳುವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಿವರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಸ್ಥಳದಲ್ಲಿ ಆರ್‌ಆರ್‌ಟಿ ಸಿಬ್ಬಂದಿ ಬೀಡುಬಿಟ್ಟಿದ್ದು, ಸಲಗದ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಆನೆ ದಾಳಿಯಿಂದ ಸ್ಥಳೀಯರು ಹಾಗೂ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದ್ದು, ಸಲಗದ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







