
ಮಡಿಕೇರಿ ಸೆ.5 NEWS DESK : ಉತ್ತರ ಪ್ರದೇಶದ ಅಯೋಧ್ಯ ಸಮೀಪದ ಡಾ. ಬಿ.ಆರ್.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಹಾಕಿ ಟರ್ಫ್ ಮೈದಾನದಲ್ಲಿ ನಡೆದ ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯಗಳ 19 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಆಟಗಾರ್ತಿಯರನ್ನು ಒಳಗೊಂಡ ಹೈದರಾಬಾದ್ ವಲಯ ತಂಡವು ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ದೇಶದ ಒಂಬತ್ತು ವಲಯಗಳ ತಂಡಗಳ ನಡುವೆ ರಾಷ್ಟ್ರೀಯ ಪ್ರಶಸ್ತಿಗಾಗಿ ನಡೆದ ಈ ಪಂದ್ಯಾವಳಿಯಲ್ಲಿ ಕೊಡಗಿನ ಗಾಳಿಬೀಡು ನವೋದಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತೃಪ್ತ ಅವರ ನಾಯಕತ್ವದಲ್ಲಿ ಹೈದರಾಬಾದ್ ವಲಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲಿ ತಾನಾಡಿದ ಎಲ್ಲಾ ಪಂದ್ಯಗಳಲ್ಲಿ ಅಮೋಘ ಆಟವಾಡಿದ ಹೈದರಾಬಾದ್ ವಲಯ ತಂಡವು ಸೆಮಿಫೈನಲ್‌ನಲ್ಲಿ ಚಂಡೀಗಢ ವಲಯ ತಂಡವನ್ನು 3-0 ಗೋಲುಗಳಿಂದ ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿತು. ಫೈನಲ್ ಪಂದ್ಯದಲ್ಲಿಯೂ ಹೈದರಾಬಾದ್ ವಲಯ ತಂಡವು ಕರಾರುವಕ್ಕಾದ ಆಟ ಪ್ರದರ್ಶಿಸಿತು. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಅಂತಿಮವಾಗಿ ಸ್ಥಳೀಯ ಬಲಿಷ್ಠ ಲಕ್ನೋ ವಲಯ ತಂಡದ ವಿರುದ್ಧ 2-4 ಗೋಲುಗಳ ಅಂತರದಿಂದ ಪರಾಭವಗೊಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಇದೇ ವೇಳೆ ಹೈದರಾಬಾದ್ ವಲಯ ತಂಡದ ನಾಯಕಿ, ಕೊಡಗಿನ ಕುಮಾರಿ ತೃಪ್ತ ಹಾಗೂ ತಂಡದ ಮುನ್ನಡೆ ಆಟಗಾರ್ತಿ ದಕ್ಷಿಣ ಕನ್ನಡದ ಕುಮಾರಿ ಶ್ರೇಯಾ ಅವರು 2026ರ ಪಿಎಂ ಶ್ರೀ ಜೆಎನ್‌ವಿ ಜೂನಿಯರ್ ಹಾಕಿ ರಾಷ್ಟ್ರೀಯ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿರುವುದು ವಿಶೇಷವಾಗಿದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಹೈದರಾಬಾದ್ ವಲಯ ತಂಡದ ಸಾಧನೆಗೆ ಆಟಗಾರ್ತಿಯರು, ತರಬೇತುದಾರರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.









