ಸುಂಟಿಕೊಪ್ಪ, NEWS DESK ಸೆ.10: ಕಂಬಿಬಾಣೆಯ ಕಮಲ ನೆಹರು ಯುವತಿ ಮಂಡಳಿ ವತಿಯಿಂದ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಸೆ.13ರಂದು ಭಾನುವಾರ ಕಂಬಿಬಾಣೆಯ ಅನ್ನಪೂರ್ಣೇಶ್ವರಿ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಕಮಲ ನೆಹರು ಯುವತಿ ಮಂಡಳಿಯ ಅಧ್ಯಕ್ಷೆ ಅಕ್ಷತಾ ಯೋಗೇಶ್ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀಕೃಷ್ಣನ ವಿವಿಧ ಛದ್ಮವೇಷ ಸ್ಪರ್ಧೆ, ಮುದ್ದುರಾಧೆ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಯಶೋಧೆ ಛದ್ಮವೇಷ ಸ್ಪರ್ಧೆ ನಡೆಯಲಿದೆ.
ಅದೇ ರೀತಿ 1ರಿಂದ 15 ವರ್ಷದೊಳಗಿನ ಮಕ್ಕಳಿಗೆ ವಿವಿಧ ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.
ಅಪರಾಹ್ನ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಸಾರ್ವಜನಿಕ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅಕ್ಷತಾ ಯೋಗೇಶ್ ತಿಳಿಸಿದ್ದಾರೆ.







