ಸುಂಟಿಕೊಪ್ಪ, NEWS DESK ಸೆ. 11: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ಘಟಕದ ಉದ್ಘಾಟನೆ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಕುಶಾಲನಗರ ತಾಲೂಕು ಅಧ್ಯಕ್ಷ ಶಿವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಯುವಕರು ಸಂಘಟನೆಗೆ ಸೇರ್ಪಡೆಗೊಂಡರು. ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ವಿ.ಎಸ್., ರಾಜ್ಯೋತ್ಸವ ಕಾರ್ಯಕ್ರಮದ ಖಜಾಂಜಿ ಅಂತೋನಿ, ಹಿರಿಯ ಸದಸ್ಯರಾದ ಕೆ.ಆರ್. ನಂಜಪ್ಪ, ವಿಲ್ಸನ್ ಹಾಗೂ ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರೊಡ್ರಿಗಸ್ ಅವರ ನೇತೃತ್ವ ಮತ್ತು ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸುಂಟಿಕೊಪ್ಪ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶರೀಫ್ ಎಂ.ಇ. ಅಧ್ಯಕ್ಷರಾಗಿ ಹಾಗೂ ಶಹಾದ್ ವಿ.ಎ. ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಿತಿನ್ ಮಂದಣ್ಣ, ನಿತಿನ್ ಎನ್.ಎಸ್., ನವೀನ್, ಸಂಜಯ್ ಹೋಬಳಿ, ರೋಷನ್, ಸಾಧಿಕ್, ಸಮೀರ್, ಸಿದ್ದೀಕ್, ನಾಸೀರ್, ಕರ್ಣ, ರಾಜೇಶ್ ಹಾಗೂ ಹುಸೇನ್ ಅವರು ನೂತನ ಸದಸ್ಯರಾಗಿ ಸಂಘಟನೆಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಸಂಘಟನೆಗೆ ಉತ್ತಮ ಹೆಸರು ತರುವಂತೆ ಕರೆ ನೀಡಿದರು.
ಕುಶಾಲನಗರ ತಾಲೂಕು ಅಧ್ಯಕ್ಷ ಶಿವು ಮಾತನಾಡಿ, “ಒಗ್ಗಟ್ಟಿನಲ್ಲಿ ಬಲವಿದೆ. ಸಾರ್ವಜನಿಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಿ ಅನ್ಯಾಯವಾಗುತ್ತದೆಯೋ ಅಲ್ಲಿ ಸಂಘಟನೆ ಮುಂಚೂಣಿಯಲ್ಲಿ ನಿಂತು ಹೋರಾಡಲಿದೆ” ಎಂದು ಹೇಳಿದರು.
ಮೊದಲ ದಿನವೇ ಸಮಾಜಮುಖಿ ಕಾರ್ಯ
ಘಟಕದ ಉದ್ಘಾಟನೆ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಮುಗಿದ ಬಳಿಕ ನೂತನ ಪದಾಧಿಕಾರಿಗಳು ಮತ್ತು ಸದಸ್ಯರು ತಕ್ಷಣವೇ ಸಮಾಜಮುಖಿ ಕಾರ್ಯಕ್ಕೆ ಮುಂದಾದರು. ಸುಂಟಿಕೊಪ್ಪದಿಂದ ಮಾದಾಪುರಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿದ್ದ ಅಪಾಯಕಾರಿ ಬೃಹತ್ ರಸ್ತೆ ಗುಂಡಿಗಳನ್ನು ಕಾರ್ಯಕರ್ತರು ಸ್ವತಃ ಶ್ರಮದಾನದ ಮೂಲಕ ಮುಚ್ಚಿ ದುರಸ್ತಿ ಮಾಡಿದರು.
ಸಂಘಟನೆಗೆ ಸೇರ್ಪಡೆಯಾದ ಮೊದಲ ದಿನವೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ರಸ್ತೆ ಗುಂಡಿಗಳನ್ನು ಮುಚ್ಚಿದ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರ ಕಾರ್ಯಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.







