

ವಿರಾಜಪೇಟೆ, NEWS DESK ಸೆ.14: ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಸಂಘ ಹಾಗೂ ತಾಲೂಕು ಶಿಕ್ಷಕರ ಕಲ್ಯಾಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಅನುದಾನ ರಹಿತ ಪ್ರೌಢಶಾಲೆಗಳ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಶ್ರೀವತ್ಸ ಯು.ಎಸ್. ಅವರಿಗೆ ತಾಲೂಕಿಗೆ ಕೀರ್ತಿ ತಂದ ಸಾಧನೆಗಾಗಿ “ಗೌರವ ಪ್ರತಿಭಾ ಪುರಸ್ಕಾರ” ನೀಡಿ ಅಭಿನಂದಿಸಲಾಯಿತು. ಅದೇ ರೀತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ಶೇ.100ರಷ್ಟು ಫಲಿತಾಂಶ ಪಡೆಯಲು ಶ್ರಮಿಸಿದ ಕಾವೇರಿ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಹಾಗೂ ಅಧ್ಯಾಪಕ ವೃಂದವನ್ನು ಪ್ರಶಂಸಿಸಿ ಅಭಿನಂದನಾ ಫಲಕ ನೀಡಿ ಗೌರವಿಸಲಾಯಿತು. ಶಾಲೆಯ ಪರವಾಗಿ ಈ ಪುರಸ್ಕಾರವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಪಿ.ಯು. ಅವರು ಸ್ವೀಕರಿಸಿದರು. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಹಾಗೂ ಶಾಲೆಯ ಶೇ.100ರಷ್ಟು ಫಲಿತಾಂಶಕ್ಕಾಗಿ ದೊರೆತ ಈ ಗೌರವಕ್ಕೆ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸುಧೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್, ಅಧ್ಯಾಪಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾವೇರಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.








