
ವಿರಾಜಪೇಟೆ NEWS DESK ಸೆ.14 : ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ನಂಬರ್ 376ನೇ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಬಿ.ವಿ. ಭವಾನಿ ಶಂಕರ್ ಬೋರ್ಕರ್, ಕೃಷ್ಣರಾವ್ ಹಾಗೂ ಸುಮಿತ್ರಬಾಯಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಹೆಗ್ಗಳ ಗ್ರಾಮದ ಅರ್ಚಕ ವೇಣುಗೋಪಾಲ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷರು ಹಾಗೂ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಬಿ.ವಿ. ಭವಾನಿ ಶಂಕರ್ ಬೋರ್ಕರ್ ಅವರು, ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವಾಗಿದೆ. ಮಲಬಾರ್ ರಸ್ತೆಯ ಬಳಿ ಸಂಘಕ್ಕೆ 1952ರಲ್ಲಿ ನಿವೇಶನ ದೊರೆತಿದ್ದು, 1955ರಲ್ಲಿ ಅಂದಿನ ಕೊಡಗು ಸಿ ರಾಜ್ಯದ ಮುಖ್ಯಮಂತ್ರಿ ಸಿ.ಎಂ. ಪೂಣಚ್ಚ ಅವರು ಸಂಘದ ಕಟ್ಟಡವನ್ನು ಉದ್ಘಾಟಿಸಿದ್ದರು ಎಂದು ಸ್ಮರಿಸಿದರು. ಸದಸ್ಯರ ಪ್ರೋತ್ಸಾಹ ಹಾಗೂ ಸಹಕಾರದಿಂದ ಸಂಘವು ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ. ಇದೀಗ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಶೀಘ್ರದಲ್ಲೇ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಸಂಘದ ಚಟುವಟಿಕೆಗಳು ಇನ್ನಷ್ಟು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಬಿ.ಜಿ. ನಟರಾಜ್ ಬೋರ್ಕರ್ ಮಾತನಾಡಿ, ಹಳೆಯ ಕಟ್ಟಡವಾಗಿರುವ ಹಿನ್ನೆಲೆಯಲ್ಲಿ ನೂತನವಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಗುರಿ ಹೊಂದಲಾಗಿದೆ. ಸದಸ್ಯರು, ಊರಿನವರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಉತ್ತಮ ಕಟ್ಟಡ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಉದಯ ಶಂಕರ್, ಉಪಾಧ್ಯಕ್ಷೆ ಸ್ವಾತಿ, ನಿರ್ದೇಶಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.








