
ಮಡಿಕೇರಿ NEWS DESK ಸೆ.14 : ಕೊಡವ ನ್ಯಾಷನಲ್ ಕೌನ್ಸಿಲ್ (CNC) ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಂಡಿರುವ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 19ರಂದು ಚೆಟ್ಟಳ್ಳಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ನೂರೊಕ್ಕನಾಡಿನ ಚೆಟ್ಟಳ್ಳಿಯಲ್ಲಿ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಹಾಗೂ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು CNC ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಡವಲ್ಯಾಂಡ್‌ಗೆ ಸಂವಿಧಾನದ 244, 371ನೇ ವಿಧಿಗಳು ಹಾಗೂ 5 ಮತ್ತು 6ನೇ ಶೆಡ್ಯೂಲ್‌ಗಳ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಜನಾಂಗಕ್ಕೆ ಮೂಲನಿವಾಸಿ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ನೀಡಬೇಕು. ಕೊಡವರ ಪವಿತ್ರ ಗನ್-ಠೋಕ್ ಆಚರಣೆಯನ್ನು ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಮುಂದುವರಿಸಬೇಕು. ಕೊಡವತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಮಾದರಿಯಲ್ಲಿ ಕೊಡವರಿಗೆ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಕಲ್ಪಿಸಬೇಕು ಎಂಬ ಬೇಡಿಕೆಗಳ ಕುರಿತು ಕೊಡವ ಜನ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, 2027ರ ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಕೊಡವ ಜನಾಂಗವನ್ನು ಪ್ರತ್ಯೇಕವಾಗಿ ದಾಖಲಿಸಲು ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಲಾಗಿತ್ತು. 1941ರ ನಂತರ ಈ ಗುರುತನ್ನು ದೊಡ್ಡ ಗುಂಪುಗಳೊಂದಿಗೆ ವಿಲೀನಗೊಳಿಸಲಾಯಿತು. 1956ರ ರಾಜ್ಯ ಮರುಸಂಘಟನಾ ಕಾಯ್ದೆಯ ಮೂಲಕ ‘ಸಿ’ ರಾಜ್ಯವಾಗಿದ್ದ ಕೊಡಗು ಕರ್ನಾಟಕದೊಂದಿಗೆ ವಿಲೀನಗೊಂಡಿದ್ದು, ಇದು ಐತಿಹಾಸಿಕ ಅನ್ಯಾಯವಾಗಿದೆ. 1941ರ ಜನಗಣತಿಯಲ್ಲಿ ಕೊಡವರ ಗುರುತು ಅಳಿಸುವಿಕೆ ಮತ್ತು 1956ರ ಕೊಡಗು ವಿಲೀನವನ್ನು ‘ಡಬಲ್ ಗುರುತು ನಷ್ಟ’ ಎಂದು ಟೀಕಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿರುವುದರಿಂದ ಹೊರಗಿನ ಬಂಡವಾಳಶಾಹಿಗಳು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿ ಮೆಗಾ ಟೌನ್‌ಶಿಪ್, ರೆಸಾರ್ಟ್ ಮತ್ತು ಲೇಔಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಕಾವೇರಿ ನದಿಯ ಮೂಲಗಳು, ಕಾಫಿ ತೋಟಗಳು, ಕೃಷಿ ಪ್ರದೇಶಗಳು ಹಾಗೂ ನಿತ್ಯಹರಿದ್ವರ್ಣ ಅರಣ್ಯಕ್ಕೆ ಹಾನಿಯಾಗುತ್ತಿದ್ದು, ಕೊಡವ ಜನಾಂಗ, ಕೊಡವಲ್ಯಾಂಡ್ ಹಾಗೂ ಕೊಡವ ಗುರುತಿನ ರಕ್ಷಣೆಯ ಉದ್ದೇಶದಿಂದ ಈ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್.ಯು.ನಾಚಪ್ಪ ಕೊಡವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







