
ಪೊನ್ನಂಪೇಟೆ, NEWS DESK ಸೆ.14 : ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿದ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿ ಮಾಲೇಟ್ಟಿರ ಛಾಲ್ಸಿ ಜಿ. ಚಾಲ್ಸಿ ಪ್ರಥಮ ಸ್ಥಾನ, ಏಳನೇ ತರಗತಿಯ ವಿದ್ಯಾರ್ಥಿನಿ ಅಮ್ಮಂಡ ಗಿಯಾನಾ ಎ. ತೃತೀಯ ಸ್ಥಾನ ಹಾಗೂ ಆರನೇ ತರಗತಿಯ ವಿದ್ಯಾರ್ಥಿನಿ ರೋನಿಕಾ ಐದನೇ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಆರನೇ ತರಗತಿಯ ವಿದ್ಯಾರ್ಥಿ ಶರ್ಯ ಬಿ.ಎಸ್. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿ ಸಚಿನ್ ಎ. ಐದನೇ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಚೆಸ್ ಮಾಸ್ತರಾದ ಮಣಿ ಅವರು ತರಬೇತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇಶ್ ಬಿ.ಎಸ್. ಅವರು ಉಪಸ್ಥಿತರಿದ್ದರು. ತಾಲೂಕು ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೇಶ್ ಬಿ.ಎಸ್., ಕಾರ್ಯದರ್ಶಿಯಾದ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್, ಶಿಕ್ಷಕರು, ಬೋಧಕ-ಬೋಧಕೇತರ ವೃಂದದವರು ಹಾಗೂ ಪೋಷಕರು ಅಭಿನಂದಿಸಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.









