
ಮಡಿಕೇರಿ ಸೆ.15 NEWS DESK : ಮಡಿಕೇರಿಯಲ್ಲಿರುವ ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘ 2025-26ನೇ ಸಾಲಿಗೆ 54.60 ರೂ. ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.7ರ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಮಹಾಸಭೆ ಸೆ.20ರಂದು ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದರು. ಕಳೆದ ಆರ್ಥಿಕ ಸಾಲಿನಲ್ಲಿ ಸಂಘ 24 ಲಕ್ಷ ರೂ. ನಿವ್ವಳಲಾಭ ಗಳಿಸಿತ್ತು, ಈ ಸಾಲಿನಲ್ಲಿ ದುಪ್ಪಟ್ಟು ಲಾಭ ಗಳಿಸಿದೆ. ಸಂಘವು 1925 ರಲ್ಲಿ ಸ್ಥಾಪನೆಯಾಗಿ ಶತಮಾನೋತ್ಸವವನ್ನು ಈಗಾಗಲೆ ಆಚರಿಸಿಕೊಂಡಿದೆ. ಸಂಘದಲ್ಲಿ ಪ್ರಸ್ತುತ 2276 ಸದಸ್ಯರುಗಳಿದ್ದು, ವಾರ್ಷಿಕ ವಹಿವಾಟು 49.81 ಕೋಟಿ ರೂ.ಗಳಷ್ಟಿದೆ. ಸದಸ್ಯರ ಷೇರು ಬಂಡವಾಳ 2.95 ಕೋಟಿ ರೂ.ಗಳಾಗಿದ್ದು, 13.69 ಕೋಟಿಯಷ್ಟು ಠೇವಣಿಗಳಿದೆ. ದುಡಿಯುವ ಬಂಡವಾಳ 18.37 ಲಕ್ಷ ಗಳಿದ್ದು, 15 ಕೋಟಿಗೂ ಹೆಚ್ಚಿನ ಸಾಲವನ್ನು ನೀಡಲಾಗಿದ್ದು, ಒಟ್ಟಾಗಿ 2.21 ಲಕ್ಷ ಆದಾಯವನ್ನು ಸಂಘ ಗಳಿಸಿದೆ. ಲೆಕ್ಕ ಪರಿಶೋಧನೆಯಂತೆ ಸಂಘವು “ಎ” ವರ್ಗೀಕರಣವನ್ನು ಪಡೆದಿರುವುದಾಗಿ ತಿಳಿಸಿದರು. ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘದ ಮಡಿಕೇರಿ ಮುಖ್ಯ ಕಚೇರಿಯ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಕಾರ್ಯ ನಡೆಯತ್ತಿದೆ.ಈಗಾಗಲೆ ಇ-ಸ್ಟಾಂಪಿಂಗ್, ಆರ್‍ಟಿಸಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಜನಸಾಮಾನ್ಯರಿಗೆ ಅತ್ಯಂತ ಸಲಭವಾಗಿ ದೊರಕುವಂತೆ ಮಾಡಲಾಗಿದೆ ಎಂದರು. *ಶತಮಾನೋತ್ಸವ ಭವನ* ಸಂಘವು ಶತಮಾನೋತ್ಸವವನ್ನು ಆಚರಿಸಿಕೊಂಡ ಸವಿನೆನಪಿಗಾಗಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ “ಶತಮಾನೋತ್ಸವ ಭವನ”ದ ನಿರ್ಮಾಣ ಕಾರ್ಯವನ್ನು ನಗರದ ಶ್ರೀ ಆಂಜನೇಯ ದೇಗುಲದ ಬಳಿಯಲ್ಲಿರುವ ಗುರುಸದನದ ಜಾಗದಲ್ಲಿ ಶೀಘ್ರದಲ್ಲೆ ಆರಂಭಿಸಲಾಗುತ್ತದೆಂದು ಅಧ್ಯಕ್ಷ ಹೆಚ್.ಎಸ್.ಚೇತನ್ ತಿಳಿಸಿದರು. *ಸಹಕಾರಿ ಪ್ರಶಸ್ತಿ* ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘವು ತನ್ನ ಸರ್ವಾಂಗೀಣ ಕಾರ್ಯಚಟುವಟಿಕೆಗಳ ಹಿನ್ನೆಲೆಯಲ್ಲಿ “ಉತ್ತಮ ಸೌಹಾರ್ದ ಸಹಕಾರಿ” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿತ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಪಿ.ಬಿ.ಸ್ವಾತಿ, ನಿರ್ದೇಶಕರುಗಳಾದ ಪುದಿಯನೆರವನ ರೇವತಿ ರಮೇಶ್, ಹೆಚ್.ಎನ್.ಮಂಜುನಾಥ್, ಆಡಳಿತಾಧಿಕಾರಿ ಎಸ್.ಸಿ.ನಟೇಶ್ ಹಾಗೂ ಲೆಕ್ಕಾಧಿಕಾರಿ ಸಿ.ಎಂ.ಕಿಶೋರ್ ಉಪಸ್ಥಿತರಿದ್ದರು.










