
ಸುಂಟಿಕೊಪ್ಪ, ಸೆ.15 NEWS DESK : ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಸಂಘ-ಸಮಿತಿಗಳ ವತಿಯಿಂದ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮೀಪದ 7ನೇ ಹೊಸಕೋಟೆಯ ಗೆಳೆಯರ ಬಳಗದ ವತಿಯಿಂದ 41ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಎಮ್ಮೆಗುಂಡಿ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ 2ನೇ ವರ್ಷದ ಗೌರಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಹಾಗೂ ವಿಶೇಷ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ತೀರ್ಥ ಪ್ರಸಾದ ಹಾಗೂ ಭಕ್ತಾದಿಗಳಿಗೆ ಲಘು ಉಪಾಹಾರ ವಿತರಿಸಲಾಯಿತು. ಸಮೀಪದ ಹೊರೂರು ಮಠದಲ್ಲಿ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದಿನದ ಅಂಗವಾಗಿ ಸ್ಥಳಶುದ್ಧಿ, ಗಣಹೋಮ ಹಾಗೂ ವಿವಿಧ ಅಲಂಕಾರ ಪೂಜೆಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ದೇವಿ ಪ್ರಸಾದ್ ಕಾಯಾರ್ ಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೆದಕಲ್ ಗ್ರಾಮದ ಮಹದೇಶ್ವರ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿ ವತಿಯಿಂದ 14ನೇ ವರ್ಷದ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹರದೂರು, ಕಾನ್‌ಬೈಲ್, ಮತ್ತಿಕಾಡು ಸೇರಿದಂತೆ ವಿವಿಧೆಡೆಗಳಲ್ಲಿಯೂ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಪೂಜೆಗಳು ನಡೆದವು. :: ಭಕ್ತರ ಸಮ್ಮುಖದಲ್ಲಿ ವಿಸರ್ಜನೋತ್ಸವ :: ಸೋಮವಾರ ಪ್ರತಿಷ್ಠಾಪಿಸಲಾದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವವು ಸೋಮವಾರ ಸಂಜೆ ವಿವಿಧೆಡೆ ನಡೆಯಿತು. ಕಾಂಡನಕೊಲ್ಲಿ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಗ್ರಾಮದಾದ್ಯಂತ ಸಂಚರಿಸಿದ ಮೆರವಣಿಗೆಯ ಬಳಿಕ ರಾತ್ರಿ ಗ್ರಾಮದ ಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು. ಸಮೀಪದ ಕೆದಕಲ್ ಗ್ರಾಮದ ಮಹದೇವ ಈಶ್ವರ ದೇವಾಲಯದಲ್ಲಿಯೂ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಸರ್ಜನಾ ಮೆರವಣಿಗೆ ನಡೆಯಿತು. ಬಳಿಕ ಸ್ಥಳೀಯ ಕೆರೆಯಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.










