ಮಡಿಕೇರಿ, NEWS DESK ಸೆ. 18: ಭಾರತ ಸರ್ಕಾರದ ರಾಷ್ಟ್ರೀಯ ಯುವ ಜನೋತ್ಸವವಾದ **“ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್” (VBYLD)**ನ ಆನ್‌ಲೈನ್ ಕಾರ್ಯಕ್ರಮದಡಿ “ವಿಕಸಿತ ಭಾರತ್ ರಸಪ್ರಶ್ನೆ” ಆರಂಭಗೊಂಡಿದ್ದು, ಯುವ ಸಮೂಹ ಇದರಲ್ಲಿ ತೊಡಗಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಮೈ ಭಾರತ್‌ನ ಜಿಲ್ಲಾ ಯುವಜನ ಅಧಿಕಾರಿ ಪಿ. ಅಖಿಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರವ್ಯಾಪಿ 15ರಿಂದ 29 ವರ್ಷದೊಳಗಿನ ಯುವ ಸಮೂಹವನ್ನು ಒಗ್ಗೂಡಿಸಿ, ಅವರ ಚಿಂತನೆಗಳನ್ನು ಅರಿತು, ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್ ಯುವ ಜನೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್‌ನಲ್ಲಿ ಪ್ರಮುಖವಾಗಿ ವಿಕಸಿತ ಭಾರತ್ ಚಾಲೆಂಜ್ ಟ್ರ್ಯಾಕ್, ಸಾಂಸ್ಕೃತಿಕ ಟ್ರ್ಯಾಕ್, ಡಿಸೈನ್ ಫಾರ್ ಭಾರತ್, ಹ್ಯಾಕ್ ಫಾರ್ ಸೋಶಿಯಲ್ ಕಾಸ್, ಯುವ ಉದ್ಯಮಿಗಳ ಸವಾಲು ಹಾಗೂ ಯುವ ಸಂಸತ್ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಪ್ರತಿಭಾವಂತ ಯುವ ಸಮೂಹವನ್ನು ಗುರುತಿಸಿ, ಪ್ರಧಾನಮಂತ್ರಿಗಳೊಂದಿಗೆ ನೇರ ಸಂವಹನಕ್ಕೆ ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ವಿಕಸಿತ ಭಾರತ್ ಚಾಲೆಂಜ್ ಟ್ರ್ಯಾಕ್ನಡಿ ಪ್ರಾದೇಶಿಕ ಅಭಿವೃದ್ಧಿ ವಿಷಯಗಳನ್ನು ಆಧರಿಸಿದ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ ಕಳೆದ ಆಗಸ್ಟ್ 17ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಇದರಲ್ಲಿ ಆಸಕ್ತ, ನಿಗದಿತ ವಯೋಮಿತಿಯ ಯುವಕರು mybharat.gov.in ಮೂಲಕ ನೋಂದಣಿ ಮಾಡಿಕೊಂಡು ರಸಪ್ರಶ್ನೆಯಲ್ಲಿ ಭಾಗವಹಿಸಬಹುದು. 10 ನಿಮಿಷಗಳ ಅವಧಿಯಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿ 11 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಒಟ್ಟು ಸ್ಪರ್ಧಿಗಳ ಪೈಕಿ ಶೇ. 10 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸ್ಪರ್ಧಿಗಳಿಗೆ ಮುಂದಿನ ಅಕ್ಟೋಬರ್ 5ರಿಂದ 19ರವರೆಗೆ ಆನ್‌ಲೈನ್ ಪ್ರಬಂಧ ಸ್ಪರ್ಧೆ ನಡೆಯಲಿದೆ. ಇದರ ಮೂಲಕ ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ 50 ಸ್ಪರ್ಧಿಗಳಿಗೆ ನವೆಂಬರ್ 10ರಿಂದ 16ರವರೆಗೆ ನಿಗದಿತ ವಿಷಯದಡಿ ರಚಿಸುವ ಪ್ರಬಂಧಗಳ ಪಿಪಿಟಿ ಪ್ರಸ್ತುತಪಡಿಸುವ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.
ಇದರಲ್ಲಿ ಆಯ್ಕೆಯಾಗುವ ಇಬ್ಬರು ಸ್ಪರ್ಧಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಹೀಗೆ ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ಸ್ಪರ್ಧಿಗಳಿಗೆ ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ಪ್ರಬಂಧಗಳ ಪಿಪಿಟಿ ಪ್ರಸ್ತುತಪಡಿಸುವ ಸ್ಪರ್ಧೆ ನಡೆಯಲಿದ್ದು, ಅಲ್ಲಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ನಡೆಯಲಿದೆ.
ಅಂತಿಮವಾಗಿ 2027ರ ಜನವರಿ 10 ಮತ್ತು 12ರಂದು ನವದೆಹಲಿಯಲ್ಲಿ ಪ್ರಾದೇಶಿಕ ಮಟ್ಟದ ಅಂತಿಮ ಸ್ಪರ್ಧಿಗಳು ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಪ್ರಬಂಧಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಿ. ಅಖಿಲ್ ಹೇಳಿದರು.
ಚಾಮರಾಜನಗರದಲ್ಲಿ ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್‌ನ ಸಾಂಸ್ಕೃತಿಕ ಟ್ರ್ಯಾಕ್‌ನ ಜಿಲ್ಲಾ ಸ್ಪರ್ಧೆಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 31ರೊಳಗಾಗಿ ಎರಡು-ಮೂರು ದಿನಗಳ ಕಾಲ ಆಯೋಜಿಸಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಜಾನಪದ ನೃತ್ಯ-ಗೀತೆ, ಚಿತ್ರಕಲೆ, ಭಾಷಣ ಸ್ಪರ್ಧೆ ಹಾಗೂ ಕವನ ರಚನಾ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದ ವಿಜೇತರು ರಾಜ್ಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಮೈ ಭಾರತ್‌ನ ಸ್ವಯಂಸೇವಕಿ ದೀಪ್ತಿ ಡಯಾನ ಹಾಗೂ ಜಿ.ಪಿ. ರಂಜಿತ್ ಉಪಸ್ಥಿತರಿದ್ದರು.







