ಮಡಿಕೇರಿ, NEWS DESK ಸೆ. 18: ಪ್ರತಿಭಟನೆಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನಗರದ ಹೃದಯ ಭಾಗದಲ್ಲಿರುವ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಅಗೌರವವಾಗದಂತೆ ಎಚ್ಚರ ವಹಿಸಬೇಕು ಎಂದು ಕಾಲೂರು ಗ್ರಾಮದ ಮುತ್ತ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಅಯಲಪಂಡ ಮಿಟ್ಟು ಉತ್ತಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಮ್ಮೆಯ ಸೇನಾನಿ, ಕೊಡಗಿನ ವೀರಪುತ್ರ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ಸ್ಮರಣಾರ್ಥ ನಗರದಲ್ಲಿ ಪ್ರತಿಷ್ಠಾಪಿಸಿರುವ ಜನರಲ್ ತಿಮ್ಮಯ್ಯ ಪ್ರತಿಮೆಯ ಆವರಣಕ್ಕೆ ಪ್ರತಿಭಟನೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪಾದರಕ್ಷೆ ಧರಿಸಿ ಪ್ರವೇಶಿಸುವುದು, ತ್ಯಾಜ್ಯ ವಸ್ತುಗಳನ್ನು ಹಾಕುವುದು ಅಥವಾ ಅಗೌರವವಾಗುವಂತೆ ನಡೆದುಕೊಳ್ಳುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಕೊಡಗಿನ ಜನತೆ ಹೆಮ್ಮೆಯಿಂದ ಕಾಣುವ ವೀರ ಸೇನಾನಿಯ ಪ್ರತಿಮೆಯನ್ನು ಗೌರವದಿಂದ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನಗರದಲ್ಲಿ ನಡೆಯುವ ಕೆಲವು ಪ್ರತಿಭಟನೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿಮೆಯ ಆವರಣದ ಕಟ್ಟೆಯ ಮೇಲೆ ಪಾದರಕ್ಷೆ ಧರಿಸಿ ಏರುವುದು, ಘೋಷಣೆ ಕೂಗುವುದು, ಕಸ ಹಾಕುವುದು, ಗೋಡೆಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಅಂಟಿಸುವಂತಹ ವರ್ತನೆಗಳು ಕಂಡುಬರುತ್ತಿವೆ. ಇದು ವೀರ ಸೇನಾನಿಗೆ ಅಗೌರವ ತೋರಿದಂತಾಗುತ್ತಿದ್ದು, ಈ ರೀತಿಯ ಸನ್ನಿವೇಶಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಯಾವುದೇ ಪ್ರತಿಭಟನೆ, ಸಭೆ ಅಥವಾ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಜನರಲ್ ತಿಮ್ಮಯ್ಯ ಅವರ ಗೌರವಕ್ಕೆ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆಯನ್ನು ಮಿಟ್ಟು ಉತ್ತಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುತ್ತ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಕಾರೆರ ವಾಸು ಜೋಯಪ್ಪ, ಕಾರ್ಯದರ್ಶಿ ನಂದಿರ ಹರಿ ಚಂಗಪ್ಪ, ಆಡಳಿತ ಮಂಡಳಿ ಸದಸ್ಯರಾದ ರವಿ ಉಮೇಶ್ ಹಾಗೂ ಚೆನ್ನಪಂಡ ದಿಶಾಂತ್ ತಮ್ಮಯ್ಯ ಉಪಸ್ಥಿತರಿದ್ದರು.








