ಮಡಿಕೇರಿ, NEWS DESK ಸೆ.21: ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಎದುರಿಸಲು ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಪ್ರದರ್ಶಿಸಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಕರೆ ನೀಡಿದರು.
ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ವೈಆರ್‌ಸಿ ಘಟಕಗಳ ಸಹಯೋಗದಲ್ಲಿ ನಡೆದ **“ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ”**ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೈಸರ್ಗಿಕವಾಗಿರಲಿ ಅಥವಾ ಮಾನವ ನಿರ್ಮಿತವಾಗಿರಲಿ, ವಿಪತ್ತುಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಇಂತಹ ಸಂದರ್ಭಗಳನ್ನು ಎದುರಿಸಲು ಪ್ರತಿಯೊಬ್ಬರೂ ಜೀವ ರಕ್ಷಕ ತರಬೇತಿ ಹೊಂದಿರಬೇಕು. ವಿಪತ್ತು ನಿರ್ವಹಣೆಯಲ್ಲಿ ಸ್ವಂತ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಸಂತ್ರಸ್ತರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಅಗತ್ಯ ಕೌಶಲ್ಯಗಳನ್ನು ಪಡೆದು ಧೈರ್ಯ, ಶಿಸ್ತು ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜ ಮತ್ತು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎನ್‌ಡಿಆರ್‌ಎಫ್‌ನ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಅವರು ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಕೈಗೊಳ್ಳುವ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಕುರಿತು ವಿವರಿಸಿದರು.
ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಸಮುದಾಯದ ಜನರು ಮೊದಲು ಸ್ಥಳದಲ್ಲಿರುವುದರಿಂದ, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಿಸುವ ಮೂಲಭೂತ ಕೌಶಲ್ಯಗಳ ಜ್ಞಾನ ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ತರಬೇತಿ ಪಡೆದು ತುರ್ತು ಸಂದರ್ಭಗಳಲ್ಲಿ ರಕ್ಷಣಾ ತಂಡಗಳೊಂದಿಗೆ ಕೈಜೋಡಿಸಿ ಸಮಾಜ ಸೇವೆ ಮಾಡಬೇಕು ಎಂದರು.
ಎನ್‌ಡಿಆರ್‌ಎಫ್‌ನ ರಕ್ಷಣಾ ಕಮಾಂಡರ್ ನಾಗರಾಜು ಎ.ಪಿ. ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ಪ್ರವಾಹ, ಭೂಕುಸಿತ, ಭೂಕಂಪ, ಕಟ್ಟಡ ಕುಸಿತ ಸೇರಿದಂತೆ ವಿವಿಧ ವಿಪತ್ತು ಸಂದರ್ಭಗಳಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಗಳ ಚಿತ್ರಗಳು ಹಾಗೂ ಉದಾಹರಣೆಗಳನ್ನು ಪ್ರದರ್ಶಿಸಿದರು. ತುರ್ತು ಸಂದರ್ಭದಲ್ಲಿ ಗಾಬರಿಯಾಗದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಸ್ವಯಂ ಸುರಕ್ಷತೆಗೆ ಆದ್ಯತೆ ನೀಡುವುದು, ಗಾಯಾಳುಗಳಿಗೆ ನೆರವು ನೀಡುವುದು ಹಾಗೂ ರಕ್ಷಣಾ ತಂಡಗಳಿಗೆ ಮಾಹಿತಿ ನೀಡುವ ಕುರಿತು ತಿಳಿಸಿದರು.
ಅಪಘಾತ, ಅಗ್ನಿ ಅವಘಡ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಬಳಸುವ ಜೀವ ರಕ್ಷಕ ಸಾಮಾಗ್ರಿಗಳ ಪ್ರದರ್ಶನದ ಜೊತೆಗೆ ಪ್ರಥಮ ಚಿಕಿತ್ಸೆ, ಸಿಪಿಆರ್ ಹಾಗೂ ಇತರ ಜೀವ ರಕ್ಷಕ ಕೌಶಲ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಕಾರ್ಯಕ್ರಮಾಧಿಕಾರಿಗಳಾದ ಡಾ. ಶೈಲಶ್ರೀ ಕೆ. ಹಾಗೂ ಅಲೋಕ್ ಕೆ. ಬಿಜೈ, ಬೋಧಕ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡದ ಸದಸ್ಯರು, ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಸ್ವಯಂಸೇವಕರು ಉಪಸ್ಥಿತರಿದ್ದರು.
ಭುವನಾ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಎನ್‌ಸಿಸಿ ಕ್ಯಾಡೆಟ್ ಸಂದೇಶ್ ಸ್ವಾಗತಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕವನಾ ನಿರೂಪಿಸಿ, ಎನ್‌ಎಸ್‌ಎಸ್ ಸ್ವಯಂಸೇವಕಿ ಮೇಘಾ ವಂದಿಸಿದರು.







