ಸೋಮವಾರಪೇಟೆ, NEWS DESK ಸೆ.24: ತಾಲೂಕಿನ ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಪ್ರಸ್ತಾಪವನ್ನು ತಿರಸ್ಕರಿಸಿ ನಿರ್ಣಯ ಕೈಗೊಳ್ಳಲಾಯಿತು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆ ಬೆಟ್ಟದಳ್ಳಿ ಸಮುದಾಯ ಭವನದಲ್ಲಿ ಆಡಳಿತಾಧಿಕಾರಿ ಎ.ಬಿ. ನವೀನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ವರದಿ ಅನುಷ್ಠಾನವನ್ನು ತಿರಸ್ಕರಿಸುವಂತೆ ನಿರ್ಣಯ ಕೈಗೊಂಡರು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಳ್ಳಿ ಗ್ರಾಮವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದು ಜನವಸತಿ ಪ್ರದೇಶವಾಗಿದೆ. ಯಾವುದೇ ಕಾರಣಕ್ಕೂ ವರದಿಯನ್ನು ಅನುಷ್ಠಾನಗೊಳಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಒತ್ತಾಯಿಸಿದರು.
1978ರಿಂದ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಜನರು ಇದೀಗ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಮಾಡಿಕೊಂಡಿರುವ ಭೂಮಿಯನ್ನು ಸೆಕ್ಷನ್-4, ಸಿ ಮತ್ತು ಡಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಕುಮಾರಳ್ಳಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡಿಸಿದರೆ ಏರ್ ಡಿಸ್ಟೆನ್ಸ್‌ನಲ್ಲಿ 10 ಕಿ.ಮೀ. ವ್ಯಾಪ್ತಿಯವರೆಗೆ ಅದರ ಪರಿಣಾಮ ಬೀರಲಿದೆ. ಇದರಿಂದ ಶಾಂತಳ್ಳಿ, ಯಡೂರು ಹಾಗೂ ಸೋಮವಾರಪೇಟೆಯವರೆಗೂ ವ್ಯಾಪಿಸುವ ಸಾಧ್ಯತೆಯಿದೆ ಎಂದರು.
ಈಗಿರುವ ಅರಣ್ಯದ ಗಡಿ ಭಾಗಕ್ಕೆ ಮಾತ್ರ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಬೇಕು. ವನ್ಯಪ್ರಾಣಿಗಳು ಅರಣ್ಯದೊಳಗೆ ಇರುವಂತೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ರೈತರ ಕಾಫಿ ತೋಟಗಳಿಗೆ ಪ್ರವೇಶಿಸಬಾರದು ಎಂದು ಅರುಣ್ ಕೊತ್ನಳ್ಳಿ ಹೇಳಿದರು.
ರೈತ ಸಂಘದ ಅಧ್ಯಕ್ಷ ದಿನೇಶ್ ಮಾತನಾಡಿ, ರೈತರ ಪರವಾಗಿ ಯಾವುದೇ ಸರ್ಕಾರಗಳು ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಬೇಕು. ಯಾವುದೇ ರಾಜಕಾರಣಿಯೂ ಗ್ರಾಮದೊಳಗೆ ಕಾಲಿಡದಂತೆ ಮಾಡಬೇಕು ಎಂದು ಹೇಳಿದರು.
ವಕೀಲ ಬಿ.ಜೆ. ದೀಪಕ್ ಮಾತನಾಡಿ, ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಅರಣ್ಯದೊಳಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಎಕೋ ಸೆನ್ಸಿಟಿವ್ ಜೋನ್ ಅನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿ ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಶ್ಲಾಘನೀಯ. ಸರ್ಕಾರ ರೈತರ ಪರವಾಗಿ ನಿಲ್ಲುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್, ಡಿ.ಆರ್.ಎಫ್.ಓ. ರವಿಕಿರಣ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜು ಉಪಸ್ಥಿತರಿದ್ದರು.








