
ಮಡಿಕೇರಿ NEWS DESK ಸೆ.24: ಬಹುಸಂಖ್ಯಾತರ ಪ್ರದೇಶದಲ್ಲಿ ಸಂಯೋಜಿತ ಭೂಪ್ರದೇಶದಲ್ಲಿ ವಾಸಿಸುವ ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವಲ್ಯಾಂಡ್ ಸ್ವಾಯತ್ತತೆ ಕೊಡವರ ಕಾನೂನುಬದ್ಧ, ಸಂವಿಧಾನಾತ್ಮಕ ಮತ್ತು ಮಾನವ ಹಕ್ಕಾಗಿದ್ದು, ಕೊಡವರು ಯಾರ ದಯೆಯನ್ನೂ ಕೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯ ಸ್ಥಾನಮಾನಕ್ಕಾಗಿ ಜನಮತ ಸಂಗ್ರಹದಲ್ಲಿ ಬಹುಮತದ ಬೆಂಬಲ ಅಗತ್ಯವಾಗಬಹುದು. ಆದರೆ ಸ್ವಾಯತ್ತತೆಯ ಬೇಡಿಕೆಯನ್ನು ಸಂವಿಧಾನಾತ್ಮಕ ಸಂಸ್ಥೆಗಳ ಮುಂದೆ ಮಂಡಿಸುವ ಹಕ್ಕು ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೊಡವರ ವಿಶಿಷ್ಟ ವಂಶಾವಳಿ, ಸಾಂಸ್ಕೃತಿಕ ಗುರುತು, ಸಂಪ್ರದಾಯಗಳು ಹಾಗೂ ಆದಿಮಸಂಜಾತ ಲಕ್ಷಣಗಳನ್ನು ಸಂರಕ್ಷಿಸುವ ಅಗತ್ಯವಿದೆ. ಕೊಡವರ ಸಾಂಸ್ಕೃತಿಕ ಅಸ್ಮಿತೆ, ಮಾತೃಭಾಷೆ ಕೊಡವ ತಕ್ಕ್, ಜನಪದೀಯ ಆಚರಣೆಗಳು, ಕುಲ ಪದ್ಧತಿ, ವಂಶವಾಹಿನಿ, ಮಂದ್ಗಳು, ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ, ದೈವಿಕ ಅರಣ್ಯಗಳು, ಗನ್-ತೋಕ್ ಸೇರಿದಂತೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಸಂವಿಧಾನದ ವಿಧಿ 14, 19, 21 ಹಾಗೂ 51A(F) ಸೇರಿದಂತೆ ವಿವಿಧ ಸಂವಿಧಾನಾತ್ಮಕ ಅಂಶಗಳನ್ನು ಉಲ್ಲೇಖಿಸಿರುವ ನಾಚಪ್ಪ, ಕೊಡವರ ಸಾಂಸ್ಕೃತಿಕ ಮತ್ತು ಜನಾಂಗೀಯ ಗುರುತಿನ ರಕ್ಷಣೆಗೆ ಸರ್ಕಾರಗಳು ಜವಾಬ್ದಾರರಾಗಿವೆ ಎಂದು ಹೇಳಿದ್ದಾರೆ. ಕೊಡವರ ಐತಿಹಾಸಿಕ ನಿರಂತರತೆಯನ್ನು ಪ್ರತಿಬಿಂಬಿಸುವ ದೇವಾಟ್ ಪರಂಬ್, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಸೇರಿದಂತೆ ಪ್ರಮುಖ ಐತಿಹಾಸಿಕ ಸ್ಥಳಗಳ ಮಹತ್ವವನ್ನು ದೇಶದ ಮುಂದೆ ಪರಿಚಯಿಸುವ ಕೆಲಸವನ್ನು CNC ಕಳೆದ ಮೂರು ದಶಕಗಳಿಂದ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
*‘ಕೊಡವ’ ನಾಮಕರಣಕ್ಕೆ ನ್ಯಾಯಾಂಗದ ಮಾನ್ಯತೆ* ಕೊಡವರ ಅಧಿಕೃತ ನಾಮಕರಣದ ಕುರಿತು ಮಾತನಾಡಿರುವ ನಾಚಪ್ಪ, “ಕೊಡಗರು” ಎಂಬ ಪದದ ಬದಲಿಗೆ “ಕೊಡವ” ಎಂಬ ನಾಮಕರಣವನ್ನು ಬಳಸುವ ವಿಚಾರದಲ್ಲಿ CNC ಹೋರಾಟ ನಡೆಸಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ನ W.P. No.48624/2016 (GM-RES), 8 ಡಿಸೆಂಬರ್ 2021ರ ತೀರ್ಪನ್ನು ಉಲ್ಲೇಖಿಸಿರುವ ಅವರು, ಈ ತೀರ್ಪು ಕೊಡವ ನಾಮಕರಣದ ವಿಚಾರದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. ಈ ನ್ಯಾಯಾಂಗ ಬೆಳವಣಿಗೆಯನ್ನು 2027ರ ಜನಗಣತಿಯಲ್ಲಿ ಪ್ರತ್ಯೇಕ ಎಣಿಕೆ, UNDRIP ಹಾಗೂ 5ನೇ ಮತ್ತು 6ನೇ ಅನುಸೂಚಿಗಳ ಅಡಿಯಲ್ಲಿ ರಕ್ಷಣೆಯ ಬೇಡಿಕೆ ಮತ್ತು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಹಕ್ಕಿನ ಹೋರಾಟಕ್ಕೆ ಆಧಾರವೆಂದು CNC ಪರಿಗಣಿಸಿದೆ ಎಂದು ಹೇಳಿದ್ದಾರೆ.
*ಐತಿಹಾಸಿಕ ದಾಖಲೆಗಳ ಅಧ್ಯಯನಕ್ಕೆ ಕರೆ* ಕೊಡವರ ಇತಿಹಾಸ, ವಂಶಾವಳಿ ಮತ್ತು ಜನಾಂಗೀಯ ಗುರುತನ್ನು ದಾಖಲಿಸುವ ನಿಟ್ಟಿನಲ್ಲಿ ಜಿ. ರಿಕ್ಟರ್ ಅವರ Gazetteer of Coorg, ಐ.ಎಂ. ಮುತ್ತಣ್ಣ ಅವರ The Tiny Model State of South India, ಎಂ.ಎನ್. ಶ್ರೀನಿವಾಸ್ ಅವರ Religion and Society among the Coorgs of South India, ಡಿ.ಎನ್. ಕೃಷ್ಣಯ್ಯ ಅವರ ಕೊಡಗಿನ ಇತಿಹಾಸ, ಕೊಡವರು, The Coorg Tribes and Castes ಸೇರಿದಂತೆ ಹಲವು ಕೃತಿಗಳ ಅಧ್ಯಯನ ಅಗತ್ಯ ಎಂದು ಎನ್.ಯು.ನಾಚಪ್ಪ ಹೇಳಿದ್ದಾರೆ. ಕೊಡವರ ಇತಿಹಾಸದ ಕುರಿತು ಇತ್ತೀಚಿನ ಕೆಲವು ನಿರೂಪಣೆಗಳು ವಿಕೃತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ಅಂತಹ ನಿರೂಪಣೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೊಡವರ ಸಾಂಪ್ರದಾಯಿಕ ಮಾತೃಭೂಮಿಯಲ್ಲಿ ಅವರ ಭವಿಷ್ಯವನ್ನು ನಿರ್ಧರಿಸಲು ಸಂವಿಧಾನದ ಅಡಿಯಲ್ಲಿ ಸುರಕ್ಷಿತ ಸ್ಥಾನಮಾನ ಮತ್ತು ಸ್ವಾಯತ್ತತೆಯನ್ನು ಪಡೆಯುವ ಗುರಿಯೊಂದಿಗೆ CNC ತನ್ನ ಹೋರಾಟ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.









